ಆತ್ಮಸಾಕ್ಷಿಗೆ ತಕ್ಕಂತೆ ನಡೆದಿದ್ದೇನೆ ಎಂಬ ದೃಢ ನಂಬಿಕೆ ಇದೆ: ಸಿದ್ದರಾಮಯ್ಯ

Update: 2024-10-03 08:09 GMT

ಮೈಸೂರು, ಸೆ.3: ನನಗೆ ನ್ಯಾಯಾಲಯಗಳಲ್ಲಿ ನಂಬಿಕೆಯಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವ ಪ್ರಯತ್ನ ಮಾಡುತ್ತಿದ್ದೇವೆ. ಗಾಂಧೀಜಿ ಅವರು ಹೇಳಿದಂತೆ ಆತ್ಮಸಾಕ್ಷಿ ನ್ಯಾಯಾಲಯ ಎಲ್ಲಾ ನ್ಯಾಯಾಲಯಗಳಿಗಿಂತ ಮಿಗಿಲಾದುದು. ಆತ್ಮಸಾಕ್ಷಿಗೆ ತಕ್ಕಂತೆ ನಡೆದಿದ್ದೇನೆ ಎಂಬ ದೃಢ ನಂಬಿಕೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಇಂದು ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಸತ್ಯಕ್ಕೆ ಯಾವತ್ತೂ ಜಯ ದೊರೆಯುತ್ತದೆ. ನಿಮ್ಮೆಲ್ಲರ ಆಶೀರ್ವಾದ, ಈ ರಾಜ್ಯದ ಜನರ ಆಶೀರ್ವಾದ ಈ ಸರ್ಕಾರದ ಮೇಲೆ ಇರುವ ತನಕ ಯಾರಿಗೂ ಏನೂ ಮಾಡಲು ಸಾಧ್ಯವಿಲ್ಲ. ನಾನು ಈ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದೇನೆ. ಮೂರು ಬಾರಿ ಸೋತಿದ್ದೇನೆ. ಚಾಮುಂಡೇಶ್ವರಿ ತಾಯಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಇಲ್ಲಿಯವರೆಗೆ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ರೆ ಇಷ್ಟು ದೀರ್ಘಕಾಲ ರಾಜಕಾರಣದಲ್ಲಿ ಇರಲು ಸಾಧ್ಯವಿರಲಿಲ್ಲ ಎಂದು ಸಿದ್ದರಾಮಯ್ಯ ನುಡಿದರು.

ಕೊಟ್ಟ ಮಾತಿನಂತೆ ರಾಜ್ಯದ ಜನರಿಗೆ ಸಾಮಾಜಿಕ, ಆರ್ಥಿಕ ಶಕ್ತಿ ತುಂಬುವ ಕಾರ್ಯ ಮಾಡುತ್ತಿದ್ದೇವೆ

ಕೇವಲ ರಂಗು ರಂಗಿನ ಮಾತಿನ ಮೂಲಕ ಜನರ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ಜನಪರ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯನ್ನು ತುಂಬುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಚುನಾವಣಾ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಾನು ಮತ್ತು ಡಿ.ಕೆ.ಶಿವಕುಮಾರ್ ಚುನಾವಣೆಯಲ್ಲಿ ಜಯ ಗಳಿಸಿದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದೆವು. ಅದರಂತೆ ಚುನಾವಣೆಯಲ್ಲಿ ಜಯ ಗಳಿಸಿದ ಎಂಟೇ ತಿಂಗಳಲ್ಲಿ ಎಲ್ಲಾ ಐದು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಮೂಲಕ ಸಂವಿಧಾನದ ಆಶಯದಂತೆ ದುರ್ಬಲ ವರ್ಗದವರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬುವ ಕಾರ್ಯವನ್ನು ಮಾಡುತ್ತಿದ್ದೇವೆ. ಪಂಚ ಗ್ಯಾರಂಟಿಗಳಿಂದ ಪ್ರತಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ 40ರಿಂದ 50 ಸಾವಿರ ರೂ. ಆರ್ಥಿಕ ನೆರವು ದೊರೆಯುತ್ತಿದೆ.

ಗೃಹಲಕ್ಷ್ಮಿ ಯೋಜನೆಯಡಿ 1.21 ಕೋಟಿ ಕುಟುಂಬಗಳ ಯಜಮಾನಿಯರು ಪ್ರತಿ ತಿಂಗಳು ರೂ. 2ಸಾವಿರ ಮೊತ್ತ ಪಡೆಯುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ 1.40 ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿವೆ. ಯುವ ನಿಧಿ ಯೋಜನೆಯಡಿ 1.82 ಲಕ್ಷ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾದಾರರು ಆರ್ಥಿಕ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಈ ವರ್ಷ ಉತ್ತಮ ಮಳೆಯಾಗಿದ್ದು, ಇಡೀ ರಾಜ್ಯದ ರೈತರು ಸಂತೋಷದಿಂದ ಇದ್ದಾರೆ. ಮುಂಗಾರು ಬಿತ್ತನೆ ರಾಜ್ಯದಲ್ಲಿ 99 ಶೇ ಯಾಗಿದೆ. ಇನ್ನೂ ಹೆಚ್ಚು ಮಳೆಯಾಗಲಿ, ಹೆಚ್ಚು ಬೆಳೆಯಾಗಲಿ ನಮ್ಮ ನಿರೀಕ್ಷೆಗಿಂತ ಮೀರಿ ಬೆಳೆ ಬೆಳೆಯಲಿ ಎಂದು ಚಾಮುಂಡೇಶ್ವರಿ ತಾಯಿಯನ್ನು ಪ್ರಾರ್ಥಿಸುತ್ತೇನೆ. ಮಳೆ ಬೆಳೆ ಆದರೆ ಮಾತ್ರ ಜನರು ಸುಖ ಶಾಂತಿಯಿಂದ ಬದುಕಲು ಸಾಧ್ಯ.

ಜನರ ಹಬ್ಬವಾಗಲಿ

ಈ ಬಾರಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ದಸರಾ ಮಹೋತ್ಸವ ಅದ್ದೂರಿಯಾಗಿ ಮಾಡಲು ಸೂಚನೆ ನೀಡಿದ್ದೇನೆ. ದಸರಾ ನಾಡಹಬ್ಬವಾಗಬೇಕು, ಅಧಿಕಾರಿಗಳ ಹಬ್ಬವಾಗಬಾರದು. ಎಲ್ಲಾ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಈ ಬಾರಿ ದಸರಾ ಮಹೋತ್ಸವಕ್ಕೆ ಹಂ.ಪ. ನಾಗರಾಜಯ್ಯ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಅವರಿಗೆ ಈ ಮೊದಲೇ ಈ ಅವಕಾಶ ದೊರೆಯಬೇಕಿತ್ತು. ಹಂ.ಪ. ನಾಗರಾಜಯ್ಯ ಅವರು ಕನ್ನಡ ಸಾಹಿತ್ಯ ಹಾಗೂ ಜೈನ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆಯನ್ನು ಕನ್ನಡ ನಾಡಿನ ಜನ ಮರೆಯಲು ಸಾಧ್ಯವಿಲ್ಲ. ಅವರ ಆಯ್ಕೆ ಔಚಿತ್ಯಪೂರ್ಣ. ಕರ್ನಾಟಕ ಕಂಡ ಅಪರೂಪದ ಸಾಹಿತಿ ಅವರು ಎಂದರು.

ಹಂ.ಪ. ನಾಗರಾಜಯ್ಯ ಅವರು ಮೌಲ್ಯಯುತ ಭಾಷಣ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರಕಾರಗಳನ್ನು ವಾಮ ಮಾರ್ಗಗಳಲ್ಲಿ ಕಿತ್ತು ಹಾಕುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮಗಳಾಗಿದ್ದು, ಪ್ರಜಾಪ್ರಭುತ್ವ ಇನ್ನಷ್ಟು ಬಲಪಡಿಸಬೇಕು ಎಂದಿರುವುದು ಔಚಿತ್ಯಪೂರ್ಣವಾಗಿದೆ.

ಜನರ ಆಶೀರ್ವಾದ ಇರುವರೆಗೆ ಆಡಳಿತ

ಜನರ ಆಶೀರ್ವಾದದಿಂದ ನಾವು ಆಡಳಿತಕ್ಕೆ ಬಂದಿದ್ದೇವೆ. ಐದು ವರ್ಷಗಳ ಕಾಲ ರಾಜ್ಯದ ಜನತೆ ನಮಗೆ ಅವಕಾಶ ಕೊಟ್ಟಿದ್ದಾರೆ. ಈಗಲೂ ಎಷ್ಟೇ ತೊಡಕುಗಳು ಎದುರಾದರೂ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ಐದು ವರ್ಷಗಳ ಕಾಲ ನಾವು ಆಡಳಿತ ಮಾಡಿಯೇ ಮಾಡುತ್ತೇವೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News