ನೇಹಾ ಕೊಲೆ ಪ್ರಕರಣ ಸಂಬಂಧ ಒಂದು ಧರ್ಮವನ್ನು ಎಳೆದು ತರುವುದು ತಪ್ಪು: ಸಂಸದೆ ಸುಮಲತಾ ಅಂಬರೀಶ್

Update: 2024-04-20 12:32 GMT

ಮೈಸೂರು: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಧರ್ಮವನ್ನು ಎಳೆದು ತರುವುದು ತಪ್ಪು ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು‌.

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿದ ಅವರು, ನೇಹಾ ಕೊಲೆ ಅತ್ಯಂತ ಖಂಡನೀಯ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಧರ್ಮವನ್ನು ಎಳೆಯಬಾರದು.‌ ಯಾರೊ ಒಬ್ಬ ತಪ್ಪು ಮಾಡಿದರೆ ಒಂದು ಸಮುದಾಯದವನ್ನು ಬೆರಳು ತೋರಿಸಬಾರದು ಎಂದು ಹೇಳಿದರು.

ನೇಹಾ ಕೊಲೆ ವೈಯಕ್ತಿಕ ಎಂದು ಕೆಲವರು ಹೇಳುತ್ತಿದ್ದಾರೆ. ಇದು ಯಾರೇ ಮಾಡಿದರು ತಪ್ಪೇ, ಆದರೆ ಒಂದು ಸಮುದಾಯ ಮೆಚ್ಚಿಸಲು ಸಮರ್ಥನೆ ಮಾಡಿಕೊಳ್ಳುವುದು ತಪ್ಪೇ ಎಂದು ಕಾಂಗ್ರೆಸ್ ಅನ್ನು ಟೀಕಿಸಿದರು.

ನೇಹಾ ಕೊಲೆ ಪ್ರಕರಣ ನೋವಿನ ವಿಚಾರ. ಆಕೆ ಸತ್ತ ಮೇಲೂ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮತ್ತೆ ಸಾಯಸುತ್ತಿದ್ದಾರೆ. ಒಂದು ಸಮುದಾವನ್ನು ಬೆರಳು ತೋರಿಸುವುದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.

ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೂ ರಾಜಕೀಯ ಮಾಡಬಾರದು, ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಬಾರದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಸರಿಯಾಗಿಯೇ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನೇಹಾ ಕೊಲೆ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಮುಂದಾಗಿದೆ ನೀವು ಭಾಗವಹಿಸುತ್ತೀರ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ ಅಂಬರೀಶ್, ನಾನು ನಾಳೆ, ನಾಳಿದ್ದು ಇರುವುದಿಲ್ಲ, ಹಾಗಾಗಿ ಈ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದರು.

ಸಂಸತ್ ನಲ್ಲಿ ರಾಜ್ಯದ ಬರ ವಿಚಾರಕ್ಕೆ ಸಂಬಂಧಿಸಿದಂತೆ ನಾನೆ ಮೊದಲ ಬಾರಿಗೆ ಮಾತನಾಡಿದ್ದೇನೆ. ಈ ವಿಚಾರ ತಿಳಿಯದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮಲತಾ ಕೂಡ ಮಾತನಾಡಿಲ್ಲ ಎಂದು ಹೇಳಿದ್ದಾರೆ.‌ ಬೇಕಿದ್ದರೆ ನಾನು ದನಿ ಎತ್ತಿರುವ ವೀಡಿಯೋ ಕ್ಲಿಪಿಂಗ್ ಅನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತೇನೆ ಎಂದರು.

ಈಗಾಗಲೇ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಎನ್.ಡಿ.ಆರ್.ಎಫ್, ಪ್ರಕಾರ ರಾಜ್ಯ ಸರ್ಕಾರಕ್ಕೆ ಬರಬೇಕಿರುವ ಅನುದಾನ ನೀಡಿರುವುದಾಗಿ ಹೇಳಿದ್ದಾರೆ. ಪರಿಹಾರ ವಿಚಾರದಲ್ಲಿ ರಾಜ್ಯ ಸರ್ಕಾರ ಸರಿಯಾದ ಸಮಯಕ್ಕೆ ಮತ್ತು ಕೆಲವು ದಾಖಲೆಗಳನ್ನು ನಿಖರವಾಗಿ ಉದಗಿಸದಿರುವುದರಿಂದ ಬರಪರಿಹಾರ ವಿಳಂಬವಾಗಿದೆ ಎಂದು ಹೇಳಿದರು.

ಪಕ್ಷ ಸೂಚಿಸೊದರೆ ಮಂಡ್ಯದಲ್ಲೂ ಪ್ರಚಾರ ಮಾಡುತ್ತೇನೆ:

ನಾನೇ ಕಾರಿನಲ್ಲಿ ಹೋಗಿ ಮಂಡ್ಯದಲ್ಲಿ ಪ್ರಚಾರ ಮಾಡಲು ಆಗಲ್ಲ, ನನಗೆ ಪಕ್ಷ ಎಲ್ಲಿ ಪ್ರಚಾರ ಮಾಡುವಂತೆ ಸೂಚಿಸುತ್ತದೆಯೋ ಅಲ್ಲಿ ಪ್ರಚಾರ ಮಾಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.

ನಟ ದರ್ಶನ್ ಯಾರ ಪರ ಪ್ರಚಾರ ಮಾಡಬೇಕು ಬೇಡ ಎಂಬುದು ಅವರಿಗೆ ಬಿಟ್ಟಿದ್ದು. ಅವರೇ ಮಳವಳ್ಳಿಯಲ್ಲಿ ಸ್ಪಷ್ಟಪಡಿಸಿದ್ದಾರೆ.‌  ಯಾವ ಪಕ್ಷದ ಪರವೂ ಪ್ರಚಾರ ಮಾಡಲ್ಲ ಎಂದು ದರ್ಶನ್‌ ಹೇಳಿದ್ದಾರೆ.‌ ಹಾಗಿದ್ದ ಮೇಲೆ ಅವರು ಯಾರ ಪರ ಪ್ರಚಾರ ಮಾಡಿದರೆ ನನಗೇನು ಎಂದು ಪ್ರಶ್ನಿಸಿದರು.

ಮೋದಿ ಅವರ ಹತ್ತುವರ್ಷ ಆಡಳಿತವನ್ನು ಮೆಚ್ಚಿ ಬಿಜೆಪಿ ಸೇರಿದ್ದೇನೆ. ಅವರು ಪ್ರಧಾನಿ ಆಗಬೇಕು ಎಂದು ಪಕ್ಷ ಸೂಚಿಸಿದ ಕಡೆಗಳಿಗೆ ಹೋಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ನಗರಾಧಗಯಕ್ಷ ಎಲ್.ನಾಗೇಂದ್ರ, ಬಿಜೆಪಿ ಮುಖಂಡ ಕೇಬಲ್ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News