ಈ ಬಾರಿ ವಿಜೃಂಭಣೆಯ ಶಿಸ್ತು ಬದ್ಧ ದಸರಾ ಆಚರಣೆ : ಸಚಿವ ಎಚ್‌ಸಿ.ಮಹದೇವಪ್ಪ

Update: 2024-09-04 17:59 GMT

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದು, ಯಾವ ಲೋಪವಾಗದಂತೆ ಶಿಸ್ತು ಬದ್ಧವಾಗಿ ದಸರಾ ಆಚರಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.

ಅರಮನೆ ಮಂಡಳಿ ಕಚೇರಿಯಲ್ಲಿ ಬುಧವಾರ ದಸರಾ ಉಪ ಸಮಿತಿ ಅಧಿಕಾರಿಗಳ ಸಭೆ ಜೊತೆ ಸುದೀರ್ಘ ಸಭೆ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ದಸರಾ ಆಚರಣೆ ಸಂಬಂಧ 19 ಉಪ ಸಮಿತಿಗಳನ್ನು ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿದೆ, ಕ್ರೀಡೆ, ಸಾಂಸ್ಕೃತಿಕ, ಫಲಪುಷ್ಪ, ಕುಸ್ತಿ, ಯುವ ದಸರಾ ಸೇರಿದಂತೆ ಹಲವು ಉಪಸಮಿತಿಗಳನ್ನು ಮಾಡಲಾಗಿದೆ. ಅವರ ಕಾರ್ಯ ವೈಖರಿ, ಅವರ ಜವಾಬ್ದಾರಿಗಳು ಏನು ಎಂಬುದರ ಬಗ್ಗೆ ಚರ್ಚೆ ಮಾಡಿ ನಿರ್ದೇಶನ ನೀಡಲಾಗಿದೆ. ಕಳೆದ ಬಾರಿ ದಸರಾ ಆಚರಣೆ ಮಾಡಿದ ಅನುಭವವನ್ನು ಬಳಸಿಕೊಂಡು, ತಪ್ಪಾಗಿದ್ದರೆ ಸರಿಪಡಿಸಿಕೊಂಡು ಉತ್ತಮವಾಗಿ ಯಾವ ಲೋಪ ಆಗದಂತೆ ಶಿಸ್ತು ಬದ್ಧವಾಗಿ ದಸರಾ ಆಚರಣೆ ಮಾಡುವಂತೆ ತಿಳಿಸಿದ್ದೇನೆ ಎಂದು ಹೇಳಿದರು.

ದಸರಾದ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ನಮ್ಮ ನಾಡು, ನುಡಿ, ಆಚಾರ, ವಿಚಾರ, ಉಡುಗೆ-ತೊಡುಗೆ, ಮೈಸೂರಿನ ಸಾಂಸ್ಕೃತಿಕ ಹಿನ್ನಲೆಯ ಸ್ಪಷ್ಟ ಸಂದೇಶ ಇರಬೇಕು. ಜನ ಜೀವನ, ವೈವಿಧ್ಯತೆ, ಸಂವಿಧಾನಗಳ ಸ್ಥಬ್ಧ ಚಿತ್ರಗಳನ್ನು ತಯಾರು ಮಾಡುವಂತೆ ತಿಳಿಸಲಾಗಿದೆ ಎಂದರು.

ದಸರಾ ಹೆಚ್ಚು ಹೆಚ್ಚು ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದ ಮಾಧ್ಯಮ, ರೇಡಿಯೋ, ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಮತ್ತು ವಿಮಾನ ನಿಲ್ದಾಣಗಳಲ್ಲೂ ಪ್ರಚಾರ ಕಾರ್ಯ ಕೈಗೊಳ್ಳಲಾಗುವುದು. ಹೊರ ರಾಜ್ಯಗಳಲ್ಲೂ ದಸರಾ ಆಚರಣೆ ಬಗ್ಗೆ ಪ್ರಚಾರ ಮಾಡಲಾಗುವುದು ಎಂದು ಹೇಳಿದರು.

ಈ ಬಾರಿಯ ದಸರಾ ಉದ್ಘಾಟನೆ ಯಾರು ಮಾಡಬೇಕು ಎಂಬುದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿವೇಚನೆಗೆ ಬಿಟ್ಟಿದ್ದು, ಮುಖ್ಯಮಂತ್ರಿಗಳು ಈ ಬಗ್ಗೆ ತೀರ್ಮಾನ ಮಾಡಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅರಮನೆಯಲ್ಲಿ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಲಿದ್ದು, 4 ಗಂಟೆಯಿಂದ ಸಂಜೆ 7 ಗಂಟೆವರೆಗೆ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಇದೇ ವೇಳೆ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವತಿಷ್ಠಾಧಿಕಾರಿ ವಿಷ್ಣುವರ್ಧನ್, ಜಿ.ಪಂ. ಸಿಇಓ ಗಾಯಿತ್ರಿ, ನಗರ ಪಾಲಿಕೆ ಆಯುಕ್ತ ಅಸಾದ್‌ ಉರ್ ರೆಹಮಾನ್ ಷರೀಫ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News