ಮಕ್ಕಳ ಪ್ರತಿಭೆಗಳನ್ನು ಹೊರ ತರಲು ʼಮಕ್ಕಳ ದಸರಾʼ ಉತ್ತಮ ವೇದಿಕೆ : ಸಚಿವ ಮಧುಬಂಗಾರಪ್ಪ

Update: 2024-10-06 16:49 GMT

ಮೈಸೂರು : "ಮಕ್ಕಳಲ್ಲಿ ಅಡಗಿರುವ ನಾನಾ ಪ್ರತಿಭೆಗಳನ್ನು ಗುರುತಿಸಿ, ಹೊರ ತಂದು ಪ್ರೋತ್ಸಾಹ ನೀಡಲು ಮಕ್ಕಳ ದಸರಾ ಉತ್ತಮ ವೇದಿಕೆಯಾಗಿದೆ" ಎಂದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಉಪಸಮಿತಿ ವತಿಯಿಂದ ನಗರದ ಕರ್ನಾಟಕ ಕಲಾಮಂದಿರದಲ್ಲಿ ರವಿವಾರ ಆಯೋಜಿಸಲಾಗಿದ್ದ ʼಮಕ್ಕಳ ದಸರಾʼ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆೆಯನ್ನು ಹೊರತರುವ ನಿಟ್ಟಿನಲ್ಲಿ ಅತ್ಯಂತ ರಚನಾತ್ಮಕ ಮತ್ತು ಕ್ರಿಯಾಶೀಲವಾದ ಮಕ್ಕಳ ದಸರಾ ಆಯೋಜನೆ ಶ್ಲಾಘನೀಯ. ದಸರಾ ಉತ್ಸವದ ಸಂದರ್ಭ ಮತ್ತೆಲ್ಲೂ ಕಂಡುಬರದ ಮಕ್ಕಳ ದಸರಾವನ್ನು ಇಲ್ಲಿ ಆಯೋಜಿಸುವ ಮೂಲಕ ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡುತ್ತಿರುವುದು ಉತ್ತಮವಾದ ಪ್ರಯತ್ನ ಎಂದರು.

ವಿದ್ಯಾರ್ಥಿಗಳಿಗೂ ತಮ್ಮಲ್ಲಿರುವ ಪ್ರತಿಭೆ ಅನಾವರಣಕ್ಕೆ ಇಂತಹ ವೇದಿಕೆ ಅಗತ್ಯವಿದ್ದು, ಎಲ್ಲ ಮಕ್ಕಳಿಗೂ ಸಮಾನ ಅವಕಾಶ ನೀಡಲು ಸರ್ಕಾರದಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರು ಮಾತನಾಡಿ, ಮಕ್ಕಳು ಟಿ.ವಿ. ಹಾಗೂ ಮೊಬೈಲ್‌ಗಳಿಂದ ಹಾಳಾಗುತ್ತಿದ್ದಾರೆಂಬ ಮಾತು ಈಗ ಎಲ್ಲೆಡೆ ಕೇಳಿಬರುತ್ತಿದೆ. ಆದರೆ, ಟಿ.ವಿ. ಮೊಬೈಲ್‌ಗಳಲ್ಲಿ ಒಳಿತು–ಕೆಡಕು ಉಂಟು ಮಾಡುವ ಎರಡು ಅಂಶಗಳಿದ್ದು, ಮಕ್ಕಳು ಒಳ್ಳೆಯ ಅಂಶಗಳತ್ತ ಮಾತ್ರ ಗಮನಹರಿಸಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.

ಬಾಲ ಪ್ರತಿಭೆಗಳಿಗೆ ಸನ್ಮಾನ: ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಬಾಲ ಕಲಾವಿದರಾದ ಬಾಲನಟಿ ರೀತು ಸಿಂಗ್, ಎಚ್.ಎಸ್. ಮಹೇಶ್ ಕುಮಾರ್, ಆರ್.ಸಿ ಗೌಡ, ರಿಷಿ ಶಿವ ಪ್ರಸನ್ನ ಅವರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಮಹನೀಯರ ವೇಷಭೂಷಣ ತೊಟ್ಟು ಪುಟಾಣಿಗಳು ಗಾಂಭೀರ್ಯದಿಂದ ವೇದಿಕೆ ಮೇಲೆ ಹೆಜ್ಜೆ ಹಾಕಿದರು. ಚಾಮುಂಡಿ, ದುರ್ಗಿ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಜನಪದ ನೃತ್ಯ, ಗೀತಾಗಾಯನ ಸೌರಭ ಹೀಗೆ ಅನೇಕ ಕಲಾ ಪ್ರತಿಭೆಯನ್ನು ವೇದಿಕೆ ಮೇಲೆ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಜಿ. ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಎಸ್.ಜವರೇಗೌಡ, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ಅಧ್ಯಕ್ಷ ಭಾಗ್ಯಲಕ್ಷ್ಮಿ ನಿಂಗರಾಜು, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ಉಪ ವಿಶೇಷ ಅಧಿಕಾರಿಗಳು ಮತ್ತು ಜಂಟಿ ನಿರ್ದೇಶಕ ವಿ. ಪ್ರಿಯದರ್ಶಿನಿ,ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News