ಕೊಲೆ ಪ್ರಕರಣ: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ
ಮೈಸೂರು, ಜೂ.11: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಖ್ಯಾತ ಕನ್ನಡ ಚಲನಚಿತ್ರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಿತ್ರದುರ್ಗ ನಿವಾಸಿ ರೇಣುಕಾ ಸ್ವಾಮಿ ಎಂಬವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಅವರನ್ನು ಮೈಸೂರಿನಲ್ಲಿರುವ ಜಿಮ್ ನಿಂದ ಹೊರಡುತ್ತಿದ್ದ ವೇಳೆ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜೂ.9 ರ ರವಿವಾರ ಮೈಸೂರಿಗೆ ಆಗಮಿಸಿದ ನಟ ದರ್ಶನ್, ರಾಡಿಸನ್ ಬ್ಲೂ ಹೋಟೆಲ್ ನ ಕೊಠಡಿಯೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಜೂ.10 ರಂದು ಬೆಳಿಗ್ಗೆ ಟಿ.ನರಸೀಪುರ ರಸ್ತೆಯಲ್ಲಿರುವ ಅವರ ಫಾಮ್೯ ಹೌಸ್ ಗೆ ಭೇಟಿ ನೀಡಿದ ಬಳಿಕ ನಗರದ ಲಲಿತ್ ಮಹಲ್ ನಲ್ಲಿ ನಡೆಯುತ್ತಿರುವ ದೇವಿ ಚಿತ್ರ ಚಿತ್ರೀಕರಣದಲ್ಲಿ ಭಾಗವಹಿಸಿ ಸಂಜೆ ಇದೇ ಹೋಟೆಲ್ ನಲ್ಲಿ ತಂಗಿದ್ದರು ಎನ್ನಲಾಗಿದೆ.
ಮಂಗಳವಾರ ಬೆಳಿಗ್ಗೆ 8 ಗಂಟೆ ವೇಳೆಗೆ ಕುವೆಂಪು ನಗರದಲ್ಲಿರುವ ಗೋಲ್ಡನ್ ಜಿಮ್ ನಿಂದ ಹೊರಬಂದು ಪಕ್ಕದಲ್ಲಿದ್ದ ಜ್ಯೂಸ್ ಅಂಗಡಿಯಲ್ಲಿ ಕಲ್ಲಂಗಡಿ ಜ್ಯೂಸ್ ಕುಡಿದು ಕಾರು ಹತ್ತುವ ವೇಳೆ ಸುತ್ತುವರಿದು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು, ದರ್ಶನ್ ಅವರು ವಾಸ್ತವ್ಯ ಹೂಡಿದ್ದ ರಾಡಿಸನ್ ಬ್ಲೂ ಹೋಟೆಲ್ ಗೆ ಕರೆದುಕೊಂಡು ಬಂದು ಕೊಠಡಿ ಪರಿಶೀಲಿಸಿದ ಬಳಿಕ ಪೊಲೀಸ್ ವಾಹನದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಮೂಲತಃ ಚಿತ್ರದುರ್ಗದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆ ನಿವಾಸಿಯಾಗಿದ್ದ ರೇಣುಕಾಸ್ವಾಮಿ ಬೆಂಗಳೂರಿನ ಮೆಡಿಕಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜೂ.8ರಂದು ಬೆಳಗ್ಗೆಯಿಂದ ಮನೆಯಿಂದ ಕೆಲಸಕ್ಕೆಂದು ಹೋಗಿದ್ದ ರೇಣುಕಾಸ್ವಾಮಿ ವಾಪಸ್ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಮನೆಯವರು ಪೊಲೀಸ್ ದೂರು ನೀಡಿದ್ದರು. ಈ ನಡುವೆ ಜೂ.9ರಂದು ಬೆಳಗ್ಗೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಮೋರಿಯೊಂದರಲ್ಲಿ ರೇಣುಕಾಸ್ವಾಮಿಯ ಮೃತದೇಹ ಪತ್ತೆಯಾಗಿತ್ತು.
ಈ ಬಗ್ಗೆ ತನಿಖೆ ನಡೆಸಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ ಆರೋಪದಲ್ಲಿ ನಟ ದರ್ಶನ್ ಸಹಿತ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ನಟ ದರ್ಶನ್ ಮೈಸೂರಿನಲ್ಲಿ ಓಡಾಡಲು ಇಟ್ಟುಕೊಂಡಿದ್ದ ಲ್ಯಾಂಡ್ ರೋವರ್ ಕಾರು ಕೆ.ಎ.01-ಎಂ.ವೈ.7999 ಕಾರನ್ನು ಹೋಟೆಲ್ ಮುಂಭಾಗದಲ್ಲೇ ನಿಲ್ಲಿಸಲಾಗಿದೆ. ನಟ ದರ್ಶನ್ ಗೆ ಪ್ರಿಯಾವಾದ ನಂಬರ್ ಇದಾಗಿದ್ದು ಇದೇ ನಂಬರಿನ ಹಲವು ಕಾರುಗಳು ನಟ ದರ್ಶನ್ ಬಳಿ ಇದೆ ಎನ್ನಲಾಗಿದೆ.