ಮೈಸೂರು: ದನ ಮೇಯಿಸುತ್ತಿದ್ದ ರೈತನ ಮೇಲೆ ಹುಲಿ ದಾಳಿ
ಮೈಸೂರು, ನ.1: ರೈತನೋರ್ವನ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಜಿಲ್ಲೆಯ ನಂಜನಗೂಡು ತಾಲೂಕು ಮಹದೇವನಗರದ ಹೊರವಲಯದಲ್ಲಿ ನಡೆದಿದೆ. ವಿಷಯ ತಿಳಿದು ಪರಿಶೀಲನೆಗೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ಥಳಿಸಿದ ಘಟನೆ ವರದಿಯಾಗಿದೆ.
ಹುಲಿದಾಳಿಗೆ ಒಳಗಾದ ರೈತ ವೀರಭದ್ರ ಬೋವಿ ಎಂದು ಗುರುತಿಸಲಾಗಿದೆ. ವೀರಭದ್ರ ಭೋವಿ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಸಮೀಪದ, ನಂಜನಗೂಡು ತಾಲೂಕಿನ ಮಹದೇವ ನಗರ ಗ್ರಾಮದ ಮತ್ತಿ ಮರದ ಜೇನುಕಟ್ಟೆಯ ಬಳಿ ದನ ಮೇಯಿಸುತ್ತಿದ್ದಾಗ ಹಸು ಹಾಗೂ ಕರುವಿನ ಮೇಲೆ ಹುಲಿ ದಾಳಿ ನಡೆಸಿದೆ. ಆಗ ಹಸುವನ್ನು ರಕ್ಷಿಸಲು ಮುಂದಾದ ವೀರಭದ್ರ ಅವರ ಮೇಲೂ ಹುಲಿ ದಾಳಿ ಮಾಡಿತ್ತು.
ತೀವ್ರವಾಗಿ ಗಾಯಗೊಂಡ ವೀರಭದ್ರ ಬೋವಿಯವರನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಲಿ ದಾಳಿ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮಹಾಂತೇಶ್ ವಿರುದ್ಧ ಆಕ್ರೋಶಗೊಂಡ ರೈತರು ಥಳಿಸಿದ್ದಾರೆ. ಈ ವೇಳೆ ಕೆಲವರು ಅರಣ್ಯ ಇಲಾಖೆ ಸಿಬ್ಬಂದಿ ಮಹಾಂತೇಶ್ ಅವರನ್ನು ಬಿಡಿಸಿ ಕಳುಹಿಸಿದ್ದಾರೆ.
ಮಹದೇವನಗರದ ಹೊರವಲಯದಲ್ಲಿ ಪದೇ ಪದೆ ಹುಲಿ ದಾಳಿ ನಡೆಯುತ್ತಿದ್ದು ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯಾ ಇಲಾಖೆ ಸಿಬ್ಬಂದಿಗೆ ಥಳಿಸಿ ಆಕ್ರೋಶ ಹೊರ ಹಾಕಿದ್ದಾರೆ.
ನಂಜನಗೂಡು ತಾಲೂಕಿನ ಮಹದೇವ ನಗರದ ಹೊರವಲಯದಲ್ಲಿ ಹುಲಿಯ ಓಡಾಟ ಆತಂಕಕ್ಕೆ ಕಾರಣವಾಗಿದೆ. ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳೀಯರ ಮೊಬೈಲ್ನಲ್ಲಿ ಹುಲಿ ಓಡಾಟದ ದೃಶ್ಯ ಸೆರೆಯಾಗಿದೆ.
ಗಾಯಾಳು ವೀರಭದ್ರ ಭೋವಿ ಅವರನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.