ನಂಜನಗೂಡು | ರಸ್ತೆಗೆ ಅಂಬೇಡ್ಕರ್ ಹೆಸರಿಡುವ ವಿಚಾರದಲ್ಲಿ 2 ಸಮುದಾಯಗಳ ನಡುವೆ ಘರ್ಷಣೆ: 30ಕ್ಕೂ ಅಧಿಕ ಮಂದಿಗೆ ಗಾಯ

Update: 2024-01-30 04:00 GMT

ಮೈಸೂರು, ಜ.30: ರಸ್ತೆ ಮಾರ್ಗಕ್ಕೆ ನಾಮಫಲಕ ಹಾಕುವ ವಿಚಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿ ಕಲ್ಲು ತೂರಾಟ ನಡೆದು ಪರಿಶಿಷ್ಟ ಜಾತಿ ಸಮುದಾಯದ ಮಹಿಳೆಯರು ಸೇರಿದಂತೆ 30ಕ್ಕೂ ಅಧಿಕ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಗಾಯಾಳುಗಳಲ್ಲಿ ಪೊಲೀಸರು ಸೇರಿದ್ದಾರೆ.

ಹಲ್ಲರೆ ಗ್ರಾಮದ ದಲಿತ ಸಮುದಾಯ ಗ್ರಾಪಂ ಸಭೆ ನಡಾವಳಿಯಲ್ಲಿ ಅನುಮತಿ ಪಡೆದು ತಮ್ಮ ಬೀದಿಗಳ ರಸ್ತೆಗಳಿಗೆ ಮಹಾನ್ ನಾಯಕರುಗಳ ಹೆಸರನ್ನು ಹಾಕಲು ನಾಮಫಲಕ ನೆಟ್ಟಿದ್ದರು. ಈ ವೇಳೆ ಊರಿನ ಸರ್ಕಲ್ ಪಕ್ಕದ ದಲಿತ ಬೀದಿಗೆ ಹಾಕಲಾಗಿದ್ದ ನಾಮಫಲಕವನ್ನು ಇನ್ನೊಂದು ಸಮುದಾಯದವರು ಕಳೆದ ಎರಡು ದಿನಗಳ ಹಿಂದೆ ಕಿತ್ತು ಹಾಕಿದ್ದರು. ಈ ವಿಚಾರವಾಗಿ ಪೊಲೀಸರಿಗೆ ದಲಿತ ಸಮುದಾಯದವರು ದೂರನ್ನು ನೀಡಿದ್ದರು ಎನ್ನಲಾಗಿದೆ.

ಈ ವೇಳೆ ಪೊಲೀಸರು ಮತ್ತು ಪಿಡಿಓ ಸ್ಥಳಕ್ಕೆ ಭೇಟಿ ನೀಡಿ ನಾಮಫಲಕ ಹಾಕುವುದರಿಂದ ಯಾವುದೇ ತೊಂದರೆ ಇಲ್ಲ. ಇದನ್ನು ನಾವೇ ಹಾಕಿಸುತ್ತೇವೆ ಯಾವುದೇ ಗಲಾಟೆ ಘರ್ಷಣೆ ಬೇಡ ಎಂದು ಎರಡೂ ಸಮುದಾಯದವರಿಗೂ ಎಚ್ಚರಿಕೆ ನೀಡಿ ಹೋಗಿದ್ದರು ಎಂದು ತಿಳಿದು ಬಂದಿದೆ.

ಆದರೆ ಸೋಮವಾರ ರಾತ್ರಿ ಇದೇ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಒಂದು  ಸಮುದಾಯದವರು ದಲಿತರ ಬೀದಿಗೆ ನುಗ್ಗಿ ಕಲ್ಲುಗಳಿಂದ ಹೊಡೆದಿದ್ದಾರೆ. ದಲಿತ ಸಮುದಾಯದವರ ಮನೆಗಳ ಮುಂದೆ ದಾಂಧಲೆ ನಡೆಸಿ ಅಲ್ಲಿ ನಿಲ್ಲಿಸಿದ್ದ ಸ್ಕೂಟರ್ ಗಳನ್ನು ಜಖಂ ಗೊಳಿಸಿದ್ದಾರೆ. ಗೂಡ್ಸ್ ಆಟೋಗಳ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.

ಪರಿಣಾಮ ದಲಿತ ಸಮುದಾಯದ 30ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು. ತಕ್ಷಣ ಅವರುಗಳನ್ನು ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲಾಗಿದೆ. ಕೆಲವರ ಪರಿಸ್ಥಿತಿ ತೀವ್ರವಾಗಿರುವ ಕಾರಣ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿದೆ.

ವಿಷಯ ತಿಳಿದ ಕೂಡಲೇ ನಂಜನಗೂಡು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು. ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಗ್ರಾಮದಲ್ಲಿ ಪ್ರಕ್ಷ್ಯುಬ್ಧ ವಾತಾವರಣ ನಿರ್ಮಾಣವಾಗಿದ್ದು. ಘಟನೆಗೆ ಕಾರಣರಾದವರವನ್ನು ಪೊಲೀಸರು ಹುಡುಕುತ್ತಿದ್ದಾರೆ.

ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಕೂಡ ಗ್ರಾಮಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ನಂಜನಗೂಡು ಡಿವೈಎಸ್ಪಿ ಗೋವಿಂದರಾಜು, ಸರ್ಕಲ್ ಇನ್ಸ್ ಪೆಕ್ಟರ್ ಸುನೀಲ್ ಸ್ಥಳದಲ್ಲೇ ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News