ನಂಜನಗೂಡು: ಹಲ್ಲರೆ ಗ್ರಾಮದಲ್ಲಿ ನಡೆದ ಕೋಮು ಸಂಘರ್ಷ ಖಂಡಿಸಿ ಬೃಹತ್ ಪ್ರತಿಭಟನೆ
ಮೈಸೂರು: ನಂಜನಗೂಡು ತಾಲ್ಲೂಕು ಹಲ್ಲರೆ ಗ್ರಾಮದಲ್ಲಿ ನಡೆದ ಕೋಮು ಸಂಘರ್ಷ ಖಂಡಿಸಿ ಮತ್ತು ಪಿಡಿಓ ಮಹೇಶ್ ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಜಮಾಯಿಸಿದ ಪ್ರತಿಭಟನಾಕಾರರು, ನಗರದ ಪ್ರಮುಖ ರಸ್ತೆಗಳ ಮೂಲಕ ನಂಜನಗೂಡು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವಿನಿವಿಧಾನಸೌಧಕ್ಕೆ ತೆರಳಿ ಪ್ರತಿಭಟನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಕಿಡಿಗೇಡಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಹಲ್ಲರೆ ಗ್ರಾಮದಲ್ಲಿ ಅಂಬೇಡ್ಕರ್ ನಾಮಫಲಕ ಅಳವಡಿಸುವ ವಿಚಾರಕ್ಕೆ ಎರಡು ಕೋಮುಗಳ ನಡುವೆ ನಡೆದಿರುವ ಘರ್ಷಣೆಗೆ ಪೊಲೀಸ್ ಇಲಾಖೆ ಮತ್ತು ಪಿಡಿಓ ಅವರೇ ನೇರಹೊಣೆಗಾರರಾಗಿದ್ದು, ಇವರ ಬೇಜವಾಬ್ದಾರಿ ನಡವಳಿಕೆ ಎರಡೂ ಸಮುದಾಯದವರ ನಡುವೆ ಗಲಾಟೆಗೆ ಕಾರಣವಾಗಿದೆ. ಗ್ರಾಮದ ದಲಿತರ ಮನೆಗಳಿಗೆ ಕಿಡಿಗೇಡಿಗಳು ನುಗ್ಗಿ ದಾಂಧಲೆ ನಡೆಸಿ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಅಮಾಯಕರು ಗಂಭೀರಗಾಯಗೊಂಡು ಭಯಭೀತರಾಗಿದ್ದಾರೆ. ಇದೊಂದು ನಾಗರೀಕ ಸಮಾಜ ತಲೆತಗ್ಗಿಸುವ ಘಟನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಸರ್ಕಾರದ ಕಾನೂನು ಮತ್ತು ನಿಯಮಾವಳಿಗಳನ್ನು ಅರಿಯದೆ ಅವೈಜ್ಞಾನಿಕ ನಿರ್ಣಯ ಮಾಡಿದ್ದಾರೆ. ಕಾನೂನು ಮತ್ತು ಕೋಮು ಸಂಘರ್ಷವನ್ನು ತಡೆಯುವಲ್ಲಿ ವಿಫಲರಾಗಿರುವ ನಂಜನಗೂಡು ಗ್ರಾಮಾಂತರ ಪೊಲಿಸ್ ಠಾಣೆ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಘಟನೆಗೆ ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ವೈಫಲ್ಯವೇ ಕಾರಣವಾಗಿದ್ದು, ಪರಿಶಿಷ್ಟರ ಬೀದಿಗೆ ನುಗ್ಗಿ ಅಮಾಯಕರ ಮೇಲೆ ದೌರ್ಜನ್ಯ ನಡೆಸಿ, ಮನೆ, ಆಸ್ತಿ,ಪಾಸ್ತಿ ಹಾನಿ ಮತ್ತು ವಾಹನಗಳನ್ನು ಜಖಂಗೊಳಿಸುರುವ ಮತ್ತು ಅಂಬೇಡ್ಕರ್ ಅವರ ನಾಮಫಲಕ ಅಳವಡಿಸುವಾಗ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಕಾರಣರಾಗಿರುವ ಕಿಡಿಗೇಡಿಗಳಿಗೆ ತಕ್ಷಣ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಲೋಕನಾಥ್ ಆಗಮಿಸಿ ಮನವಿ ಸ್ವೀಕರಿಸಿದರು. ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡರುಗಳಾದ ಪುರಷೋತ್ತಮ್, ಚೋರನಹಳ್ಳಿ ಶಿವಣ್ಣ, ಚುಂಚನಹಳ್ಳಿ ಮಲ್ಲೇಶ್, ಕಾರ್ಯ ಬಸವಣ್ಣ, ಮಲ್ಲಹಳ್ಳಿ ನಾರಾಯಣ, ಸುರೇಶ್ ಶಂಕರಪುರ, ಅಭಿನಾಗಭೂಷಣ್, ಮಂಜು ಶಂಕರಪುರ, ನಾಗೇಶ್ ರಾಜ್, ಉಪ್ಪಿನಹಳ್ಳಿ ಶಿವಣ್ಣ, ಸಣ್ಣಯ್ಯ, ಬದನವಾಳು ರಾಮು, ಶ್ರೀಕಂಠ, ಕೃಷ್ಣಮೂರ್ತಿ ಬಸವಟ್ಟಿಗೆ, ಗಟ್ಟವಾಡಿ ಮಹೇಶ್, ಸುರೇಶ್ ಸಿದ್ದೇಗೌಡನಹುಂಡಿ, ನಟರಾಜು ಮಾಕನಪುರ, ಹೊಳೆಯಪ್ಪ ಏಚಗಳ್ಳಿ, ಗುರು ಕವಲಂದೆ ಸೇರಿದಂತೆ ಹಲವರು ಭಾಗವಹಿಸಿದ್ದರು.