ಮೋದಿ ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ರಾಜ್ಯದ ಜನತೆಗೆ ಹೇಳಲಿ: ಸಿಎಂ ಸಿದ್ದರಾಮಯ್ಯ

Update: 2024-04-13 06:23 GMT

ಮೈಸೂರು: 400 ಕ್ಕೂ ಹೆಚ್ಚು ಸ್ಥಾನಪಡೆಯುವುದಾಗಿ ಹೇಳಿಕೊಳ್ಳುತ್ತಿರುವ ಬಿಜೆಪಿಯದ್ದು ಜನರ ದಾರಿತಪ್ಪಿಸುವ ಕಾರ್ಯತಂತ್ರ. ಎನ್. ಡಿ ಎ ಗೆ ಪೂರ್ಣ ಬಹುಮತ ದೊರಕುವುದಿಲ್ಲ.ಬಿಜೆಪಿ ವಿರುದ್ಧವಿರುವ ಇಂಡಿಯಾ ಮೈತ್ರಿಗೆ ಬಹುಮತ ದೊರೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡದ ಅವರು, ಬಿಜೆಪಿ ಯಾವತ್ತೂ ಸಂವಿಧಾನದ ಪರವಾಗಿಲ್ಲ. ಸಂವಿಧಾನ ಜಾರಿಯಾದಾಗ ಸಾವರ್ಕರ್ ಹಾಗು ಗೋಲ್ವಾಲ್ಕರ್ ಅವರು ಭಾರತದ ಸಂವಿಧಾನವನ್ನು ವಿರೋಧಿಸಿದ್ದರು ಎಂದರು.

ಪ್ರಧಾನಿ ಮೋದಿ ನಾಳೆ ಮೈಸೂರಿಗೆ ಆಗಮಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಮೋದಿಯವರು ಬಂದು ಹೋಗಲು ನನ್ನದೇನೂ ತಕರಾರಿಲ್ಲ. ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ರಾಜ್ಯದ ಜನತೆಗೆ ಹೇಳಬೇಕು. ನಿರುದ್ಯೋಗ, ತೆರಿಗೆ ಹಂಚಿಕೆ, ಬರಗಾಲಕ್ಕೆ ಇಂದಿನವರೆಗೂ ಯಾಕೆ ಪರಿಹಾರ ನೀಡಿಲ್ಲ ಎಂಬುದಕ್ಕೆಲ್ಲಾ ಉತ್ತರ ಹೇಳಲಿ ಎಂದರು.

ಅಂಬೇಡ್ಕರ್ ಬಂದರೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ. ಬಿಜೆಪಿ ಸಂವಿಧಾನದ ಪರವಾಗಿದೆ ಎಂದು ಮೋದಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, “ಹಾಗಾದರೆ ಅನಂತಕುಮಾರ್ ಹೆಗಡೆ ಮೇಲೆ ಕ್ರಮ ಯಾಕೆ ತೆಗೆದುಕೊಂಡಿಲ್ಲ. ಅವರನ್ನು ಪಕ್ಷದಿಂದ ಅಥವಾ ಮಂತ್ರಿ ಸ್ಥಾನದಿಂದ ಕೈಬಿಟ್ಟರೇ ಎಂದು ಪ್ರಶ್ನಿಸಿದರು.

ಉತ್ತರ ಕನ್ನಡದಲ್ಲಿ ಐದು ವರ್ಷಗಳಿಂದ ಏನೂ ಕೆಲಸ ಮಾಡದೇ ಮನೆಯಲ್ಲಿ ಕುಳಿತಿದ್ದ ಅನಂತಕುಮಾರ್ ಅವರಿಗೆ, ಸೋಲುವ ವರದಿಯ ಆಧಾರದ ಮೇಲೆ ಟಿಕೆಟ್ ಕೊಟ್ಟಿಲ್ಲ ಎಂದು ಲೇವಡಿ ಮಾಡಿದರು.

ರಾಮೇಶ್ವರಂ ಕಾಫೆ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಎನ್.ಐ. ಎ ತಂಡ ಮತ್ತು ಕರ್ನಾಟಕ ಪೊಲೀಸ್ ನ್ನು ಶ್ಲಾಘಿಸಿದ ಸಿದ್ದರಾಮಯ್ಯ, ಆರೋಪಿಗಳನ್ನು ಕೋಲ್ಕತ್ತಾದಿಂದ ಬೆಂಗಳೂರಿಗೆ ಕರೆ ತಂದ ನಂತರ ವಿಚಾರಣೆ ಮಾಡಿ ಹೆಚ್ಚಿನ ವಿವರ ಪಡೆಯಲಾಗುವುದು ಎಂದರು. 

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News