ಮಹಾಪ್ರಭುವಿನ ಮುಖದಲ್ಲಿ ಆತಂಕ ಗೋಚರಿಸುತ್ತಿದೆ : ನಟ ಪ್ರಕಾಶ್ ರಾಜ್

Update: 2024-04-14 16:29 GMT

ಮೈಸೂರು : ದೇಶದಲ್ಲಿ ಬದಲಾವಣೆ ವಿರೋಧ ಪಕ್ಷದಿಂದ ಸಾಧ್ಯವಿಲ್ಲ. ಆಳುವ ಪಕ್ಷದಿಂದಲೂ ಆಗುತ್ತಿಲ್ಲ. ನಮ್ಮಿಂದ ಮಾತ್ರವೇ ಬದಲಾವಣೆ ಸಾಧ್ಯ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕು. ಮೊದಲು ಈ ಕೊರೊನಾ ಸೋಂಕನ್ನು ಕೆಳಗಿಳಿಸೋಣ ಎಂದು ನಟ ಪ್ರಕಾಶ್ ರಾಜ್  ಕರೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಆಚರಣೆ ಅಂಗವಾಗಿ ಭಾರತ ಸಂವಿಧಾನ-ಪ್ರಜಾಪ್ರಭುತ್ವದ ಉಳಿವಿಗಾಗಿ ದಲಿತ ಸಂಘರ್ಷ ಸಮಿತಿಯಿಂದ ಮೈಸೂರಿನ ಎಂ.ಜಿ. ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ರವಿವಾರ ಆಯೋಜಿಸಿದ್ದ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಬಲಶಾಲಿ ಅಲ್ಲ, ತುಂಬಾ ಬಲಹೀನನಾಗುತ್ತಿದ್ದೇನೆ ಎನ್ನುವುದು ಗೊತ್ತಾಗಿರುವುದರಿಂದಲೇ ಮಹಾಪ್ರಭುವಿನ ಮುಖದಲ್ಲಿ ಆತಂಕ ಗೋಚರಿಸುತ್ತಿದೆ. 400 ಸ್ಥಾನ ಗಳಿಸುತ್ತೇವೆ ಎನ್ನುತ್ತಾರೆ. ಅದು ಅವರ ನಂಬಿಕೆ ಅಲ್ಲ, ಭಯ. ತುಂಬಾ ವಿಶ್ವಾಸದಿಂದ ಮಾತನಾಡಿದಾಗ, ಪ್ರಶ್ನಿಸುವವರನ್ನು ಜೈಲಿಗೆ ಕಳುಹಿಸಿದಾಗ ಈಡಿಯಿಂದ ದಾಳಿ ಮಾಡಿಸಿದಾಗ ಅವರು ಹೆದರಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಮೋದಿ ಅವರನ್ನು ಮಹಾಪ್ರಭು ಎಂದು ಯಾಕೆ ಕರೆಯುತ್ತೇನೆಂದರೆ ಅದರ ಹಿಂದೊಂದು ಮರ್ಮವಿದೆ. ಅಂಬೇಡ್ಕರ್ ಸಂವಿಧಾನದ ಪ್ರಕಾರ ಮಹಾಪ್ರಭು ಎನ್ನುವವರು ಇರಬಾರದು. ಆದರೆ, ಇವರು ಮಹಾಪ್ರಭು ರೀತಿ ಓಡಾಡುತ್ತಿದ್ದಾರೆ. ಮೈಸೂರಿನ ಮಹಾರಾಜರನ್ನು ನೋಡಲು ದಿಲ್ಲಿಯ ಮಹಾಪ್ರಭು ಬರುತ್ತಾರೆ ಎಂದರು.

ಮಹಾಪ್ರಭುವಿನ ದಿಲ್ಲಿಯ ಆಸ್ಥಾನಕ್ಕೆ ಬೇಕಿರುವುದು ವಿದೂಷಕರೇ. ಕಳೆದ ಚುನಾವಣೆಯಲ್ಲಿ ರಾಜ್ಯದಿಂದ ಆಯ್ಕೆಯಾದ 27 ಮಂದಿ ಕೂಡ ವಿದೂಷಕರು. ಈ ವಿದೂಷಕರು ಬರ ಪರಿಹಾರ ಮೊದಲಾದವುಗಳ ಬಗ್ಗೆ ಮಾತನಾಡುವುದಿಲ್ಲ. ಈಗ ಮಹಾಪ್ರಭು ಮೈಸೂರಿನ ಮಹಾರಾಜರನ್ನೂ ವಿದೂಷಕರನ್ನಾಗಿಸಲು ಹೊರಟಿದ್ದಾರೆ. ಅವರೇಕೆ ಒಪ್ಪಿಕೊಂಡರೋ ನಮಗೆ ಗೊತ್ತಿಲ್ಲ. ಆದರೆ, ಅವರನ್ನು ತಡೆಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.

ನೀವು ದಾರಿ ತಪ್ಪಿ ಎಷ್ಟು ವರ್ಷವಾಯಿತು?

ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ಹಾದಿ ತಪ್ಪಿದ್ದಾರೆ ಎಂದು ಕುಮಾರಣ್ಣ ಹೇಳಿಕೆ ನೀಡಿದ್ದಾರೆ. ನೀವು ದಾರಿ ತಪ್ಪಿ ಎಷ್ಟು ವರ್ಷವಾಯಿತು?. ಎಲ್ಲಿ ಓಡಾಡಿಕೊಂಡಿದ್ದೀರಿ, ಇನ್ನೂ ಒಂದು ಕಡೆ ಸೇರಿಕೊಂಡಿಲ್ಲವಲ್ಲ ಎಂದು ವ್ಯಂಗ್ಯವಾಡಿದರು.

ಮಹಾಪ್ರಭು ಸ್ಥಾವರ, ನಾವೆಲ್ಲರೂ ಜಂಗಮರಾಗಬೇಕು. ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ. ಆದ್ದರಿಂದ ಅಂಬೇಡ್ಕರ್ ಉಳಿಸಿಕೊಂಡರೆ ಮಾತ್ರ ನಾವು ಉಸಿರಾಡಲು ಸಾಧ್ಯ. ನಮ್ಮ ಅಂಬೇಡ್ಕರ್, ಮಾನವೀಯ ಮೌಲ್ಯ ಮತ್ತು ಸಂವಿಧಾನವನ್ನು ಉಳಿಸಿಕೊಳ್ಳಬೇಕು. ಯಾವಾಗಲೂ ವಿರೋಧ ಪಕ್ಷವಾಗಿರೋಣ. ಯಾರೇ ಬಂದರೂ ಪ್ರಶ್ನಿಸೋಣ ಎಂದು ಕರೆ ನೀಡಿದರು.

ಸಮಾವೇಶದಲ್ಲಿ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರಂಗಕರ್ಮಿ ಎಚ್.ಜನಾರ್ಧನ್ (ಜನ್ನಿ), ಪ್ರಗತಿಪರ ಚಿಂತಕರಾದ ಎಸ್.ತುಕಾರಾಂ, ಬಸವರಾಜ ದೇವನೂರು, ದಸಂಸ ಜಿಲ್ಲಾ ಸಂಚಾಲಕರಾದ ಹೆಗ್ಗನೂರು ನಿಂಗರಾಜು, ಶಂಭುಲಿಂಗಸ್ವಾಮಿ, ಮುಖಂಡರಾದ ಬೆಟ್ಟಯ್ಯ ಕೋಟೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News