ಮೈಸೂರು | ಬೆಂಬಲಿಗ ಸಭೆಯಲ್ಲಿ ಗದ್ದಲ ; ನಾಮಪತ್ರ ಸಲ್ಲಿಸದ ಜೆಡಿಎಸ್ ಬಂಡಾಯ ಅಭ್ಯರ್ಥಿ ಕೆ.ಟಿ. ಶ್ರೀಕಂಠೇಗೌಡ
Update: 2024-05-16 14:43 GMT
ಮೈಸೂರು : ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಟಿ. ಶ್ರೀಕಂಠೇಗೌಡ ಅವರು ನಗರದ ಆಲಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ತಮ್ಮ ಬೆಂಬಲಿಗರೊಂದಿಗೆ ಸಭೆಯನ್ನು ಹಮ್ಮಿಕೊಂಡಿದ್ದರು. ಈ ಸಭೆಯಲ್ಲಿ ಜೆಡಿಎಸ್‌ನ ಕೆಲವು ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರ ನಡುವೆ ನಡೆದ ಜಟಾಪಟಿಯಲ್ಲಿ ದೊಡ್ಡ ಗದ್ದಲವೇ ನಡೆದು ಕೆ.ಟಿ.ಶ್ರೀಕಂಠೇಗೌಡರಿಗೆ ಗಾಯವಾದ ಘಟನೆ ನಡೆದಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಮಾಡಬೇಕಿದ್ದ ಅವರ ಆಸೆ ಈಡೇರದಂತಾಗಿದೆ.
ಕ್ಷೇತ್ರದಿಂದ ಜೆಡಿಎಸ್–ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ವಿವೇಕಾನಂದ ಅವರಿಗೆ ಪಕ್ಷವು ಬಿ.ಫಾರಂ ನೀಡಿತ್ತು. ಇದರಿಂದ ಬೇಸರಗೊಂಡಿದ್ದ ಶ್ರೀಕಂಠೇಗೌಡ ಪಕ್ಷೇತರರಾಗಿ ಸ್ಪರ್ಧಿಸುವ ಆಶಯದೊಂದಿಗೆ ಗುರುವಾರ ಸಭೆ ನಡೆಸಿದ್ದರು. ಈ ವೇಳೆ ಗದ್ದಲ ಏರ್ಪಟ್ಟು ಅವರು ಆಸ್ಪತ್ರೆ ದಾಖಲಾಗಿದ್ದಾರೆ. ಅಲ್ಲದೆ, ನಾಮಪತ್ರ ಸಲ್ಲಿಕೆಗೆ ಗುರುವಾರ ಕಡೆಯ ದಿನವಾಗಿತ್ತು.