ಬಿಜೆಪಿ ಅವಧಿಯಲ್ಲೇ ’ಮೂಡಾ’ ಭ್ರಷ್ಟಾಚಾರ : ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಆರೋಪ

Update: 2024-07-01 17:56 GMT

ಮೈಸೂರು : ಬಿಜೆಪಿ ಸರ್ಕಾರದ ಅವಧಿಯಲ್ಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿರುವ ಬಗ್ಗೆ ಆರೋಪವಿದ್ದು, ಈ ಬಗ್ಗೆ ತನಿಖೆ ನಡೆಸಿ ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ಆದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದರು.

ಮೂಡಾ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಮೈಸೂರು ಮೂಡಾದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಮಾಧ್ಯಮದ ಮೂಲಕ ತಿಳಿದುಬಂದಿದೆ. ಕಳೆದ 7 ತಿಂಗಳ ಹಿಂದೆಯೇ ಮೂಡಾದಲ್ಲಿ ಯಾವುದೇ ರೀತಿಯ ಭೂಮಿ, ನಿವೇಶನ ಹಂಚಿಕೆ ಪ್ರಕ್ರಿಯೆ ಕೈಗೊಳ್ಳದಂತೆ ನಿರ್ದೇಶನ ನೀಡಲಾಗಿತ್ತು ಎಂದರು.

ಈ ಹಿಂದೆ ಮೂಡಾಕ್ಕೆ ಜಮೀನು ನೀಡಿದ ರೈತರಿಗೆ ಬದಲಿ ಜಮೀನು ನೀಡಲಾಗುತ್ತಿತ್ತು :

2020ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಾಗ ಬಿಜೆಪಿ ಮುಖಂಡರೇ ಮೂಡಾ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಮೂಡಾಕ್ಕೆ ಜಮೀನು ನೀಡಿದ ರೈತರಿಗೆ ಬದಲಿ ಜಮೀನು ನೀಡದೆ, ಒಟ್ಟು ನಿವೇಶನಗಳ ಪೈಕಿ 50-50 ಅನುಪಾತದಲ್ಲಿ ನಿವೇಶನ ನೀಡುವ ನಿರ್ಣಯ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲು ನಗರಾಭಿವೃದ್ಧಿ ಇಲಾಖೆ ಕಮೀಷನರ್ ವೆಂಕಟಚಲಪತಿ ನೇತೃತ್ವದಲ್ಲಿ ನಾಲ್ಕು ಜನ ಸದಸ್ಯರನ್ನೊಳಗೊಂಡ ತನಿಖಾ ತಂಡ ರಚಿಸಲಾಗಿದ್ದು, ನಾಲ್ಕು ವಾರದಲ್ಲಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News