ಮುಡಾ ಹಗರಣ | ನಾವು ಕೂಡ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತೇವೆ : ಎಂ.ಲಕ್ಷ್ಮಣ್

Update: 2024-07-25 15:41 GMT

ಮೈಸೂರು : ಮುಡಾ ಹಗರಣದ ಬಗ್ಗೆ ಬಿಜೆಪಿಯವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದರೆ, ಅದೇ ದಿನ ಬಿಜೆಪಿ ಮತ್ತು ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ನಡೆದಿರುವ 20 ಪ್ರಮುಖ ಭ್ರಷ್ಟಾಚಾರದ ತನಿಖೆಯನ್ನು ನಡೆಸುವಂತೆ ಒತ್ತಾಯಿಸಿ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವುದಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರತಿ ಸವಾಲು ಹಾಕಿದ್ದಾರೆ.

ಈ ಸಂಬಂಧ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಅವಧಿಯಲ್ಲಿಯೇ ಮೈಸೂರು ಮುಡಾದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿರುವುದು. ಆದರೆ ಬಿಜೆಪಿಯವರು ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಿದ್ಧರಾಮಯ್ಯ ಅವರು 3-4 ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಸಿದ್ಧರಾಮಯ್ಯ ಭ್ರಷ್ಟಾಚಾರ ಮಾಡಿದ್ದರೆ ದಾಖಲೆ ಬಿಡುಗಡೆ ಮಾಡಲಿ.‌ ಅದು ಬಿಟ್ಟು ನಾಲಿಗೆಗೆ ಮೂಳೆ ಇಲ್ಲ ಎಂದು ಸುಳ್ಳು ಆರೋಪ ಮಾಡುವುದಲ್ಲ ಎಂದು ತಿರುಗೇಟು ನೀಡಿದರು.

ಮುಡಾ ಹಗರಣಕ್ಕೂ ಸಿದ್ಧರಾಮಯ್ಯ ಅವರಿಗೂ ಏನು ಸಂಬಂಧ ಇಲ್ಲ. ಅವರ ಕುಟುಂಬದ 3.16 ಎಕರೆ ಜಮೀನನ್ನು ಅಕ್ರಮವಾಗಿ ಮುಡಾದವರು ವಶಪಡಿಸಿಕೊಂಡು ಸೈಟ್ ಗಳನ್ನು ಹಂಚಿಕೆ ಮಾಡಿದ್ದಾರೆ. ಅದಕ್ಕೆ ಪರ್ಯಾಯವಾಗಿ ಬದಲಿ 14 ನಿವೇಶನಗಳನ್ನು ನೀಡಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಸಿದ್ಧರಾಮಯ್ಯ ಕುಟುಂಬ ದಾಖಲೆ ಕೊಟ್ಟು ಬದಲಿ ನಿವೇಶನ ಪಡೆದಿದ್ದಾರೆ.‌ ದಾಖಲೆ‌ ಇಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯದ್ರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತು ಅವರ ಕುಟುಂಬ ನಿವೇಶನಗಳನ್ನು ಪಡೆದಿದ್ದಾರೆ. ಅದರ ಬಗ್ಗೆ ಮುಡಾದಲ್ಲಿ ತನಿಖೆಯಾಗಬೇಕು ಎಂದು ಹೇಳಿದರು.

ಬಿಜೆಪಿಯ ನಾಲ್ಕು ವರ್ಷ ಎಚ್.ಡಿ.ಕುಮಾರಸ್ವಾಮಿ ಅವರ ಒಂದು ವರ್ಷದ ಆಡಳಿತ ಸೇರಿ ಐದು ವರ್ಷದಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಈ ಭ್ರಷ್ಟಾಚಾರದ ತನಿಖೆಯನ್ನು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಿ, ಸಾರ್ವಜನಿಕ ಹಣವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಜು.29ರಂದೇ ನಾವು ಕೂಡ ಪ್ರಗತಿಪರ, ರೈತ, ಕನ್ನಡಪರ, ಸಾಮಾಜಿಕ ಕಳಕಳಿಯುಳ್ಳ ನಾಗರೀಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನಿಂದ ಬೆಂಗಳೂರಿಗರ ಪದಾಯಾತ್ರೆ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಮುಖಂಡ ಬಿ.ಎಂ.ರಾಮು, ಮಾಧ್ಯಮ ವಕ್ತಾರ ಮಹೇಶ್ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News