ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಪ್ರತಿಪಕ್ಷಗಳು ರಾಜ್ಯಪಾಲರನ್ನು ಏಜೆಂಟಾಗಿ ಬಳಸಿಕೊಳ್ಳುತ್ತಿದೆ : ಎಂ.ಲಕ್ಷ್ಮಣ್
ಮೈಸೂರು: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಸಲು ಬಿಜೆಪಿ-ಜೆಡಿಎಸ್ ನಾಯಕರು ರಾಜ್ಯಪಾಲರನ್ನು ಏಜೆಂಟ್ ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼರಾಜ್ಯಪಾಲರು ಯಾವುದೇ ಪಕ್ಷದ ಏಜೆಂಟ್ ಅಲ್ಲ. ಅವರು ಬಿಜೆಪಿ ಪರವಾಗಿ ಕೆಲಸ ಮಾಡಿದರೆ ಪ್ರತಿಭಟನೆ ಮಾಡಬೇಕಾಗುತ್ತದೆʼ ಎಂದು ಎಚ್ಚರಿಸಿದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರಿಗೆ ತೊಂದರೆ ಕೊಡಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ, ಶಾಸಕ ಅಶ್ವತ್ಥ ನಾರಾಯಣ ಸಂಚು ಮಾಡಿದ್ದಾರೆ. ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸುತ್ತಾರೆ. ರಾಜ್ಯಪಾಲರು ಕೂಡಲೇ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮಾಹಿತಿ ಕೇಳುತ್ತಾರೆ. ರಾಜ್ಯಪಾಲರು ಬಿಜೆಪಿ-ಜೆಡಿಎಸ್ ನಾಯಕರ ಅಭಿಪ್ರಾಯ ಪಡೆದು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದರು.
ಸಿದ್ದರಾಮಯ್ಯ ಅವರ ಕುಟುಂಬದವರು ಖಾಸಗಿ ಜಮೀನು ಖರೀದಿಸಿದರೆ ಸರ್ಕಾರಕ್ಕೆ ಯಾವ ರೀತಿ ನಷ್ಟವಾಗುತ್ತದೆ?. 14 ನಿವೇಶನ ಪಡೆಯಲು ಸಿದ್ದರಾಮಯ್ಯ ಪ್ರಭಾವ ಬಳಸಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿದ ಮಾತ್ರಕ್ಕೆ ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳಬಹುದೇ? ಅಬ್ರಹಾಂ ಕೊಟ್ಟ ದೂರೇ ಅಂತಿಮವೇ? ಎಂದು ಪ್ರಶ್ನಿಸಿದರು.
ಟಿ.ಜೆ. ಅಬ್ರಹಾಂ ಸಲ್ಲಿಸಿರುವ 20 ಪುಟಗಳ ದೂರನ್ನು ಓದಿದರೆ ರಾಜಭವನದಲ್ಲಿ ಬಿಜೆಪಿ ನಾಯಕರು ಕುಳಿತು ಸಿದ್ಧಪಡಿಸಿರುವಂತಿದೆ. ಇದರ ವಿರುದ್ಧ ಜನರ ಮಧ್ಯೆ ಹೋಗುತ್ತೇವೆ. ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಬೀಳಿಸುವ ಪ್ರಯತ್ನ ಮಾಡಿದರೆ ಕ್ರಾಂತಿಯಾಗುತ್ತದೆ. ಹೈಕಮಾಂಡ್‌ನಿಂದ ಸೂಚನೆ ಬಂದ ತಕ್ಷಣ ಬೀದಿಗಿಳಿಯುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಬಿ.ಎಂ. ರಾಮು, ಎಚ್.ವಿ. ರಾಜೀವ್, ಕೆಪಿಸಿಸಿ ಸದಸ್ಯ ಎನ್.ಭಾಸ್ಕರ್, ಶಿವಪ್ರಸಾದ್, ಸಂತೋಷ್, ಉತ್ತನಹಳ್ಳಿ ಶಿವಣ್ಣ, ಗಿರೀಶ್, ಕೆ. ಮಹೇಶ್, ವಕೀಲರಾದ ತಿಮ್ಮಯ್ಯ, ಕಾಂತರಾಜು, ಭಾಗವಹಿಸಿದ್ದರು.