ದಸರಾದ ಮೊದಲ ಕಾರ್ಯಕ್ರಮ ʼಯುವ ಸಂಭ್ರಮʼಕ್ಕೆ ಅದ್ದೂರಿ ಚಾಲನೆ

Update: 2024-09-24 17:36 GMT

ಮೈಸೂರು : ಯುವಕರ ಸಂಭ್ರಮ ಎಂದೇ ಹೇಳಲಾಗುವ ಯುವ ಸಂಭ್ರಮವು ದಸರಾ ಮಹೋತ್ಸವದ ಮೊದಲ ಅದ್ದೂರಿ ಕಾರ್ಯಕ್ರಮವಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಯುವ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಯುವಸಂಭ್ರಮದಲ್ಲಿ ಭಾಗವಹಿಸಬೇಕೆಂದು ರಾಜ್ಯದ 470 ಕಾಲೇಜುಗಳಿಂದ ಯುವ ಪ್ರತಿಭೆಗಳು ಅರ್ಜಿ ಸಲ್ಲಿಸಿದ್ದು, 150 ಕಾಲೇಜುಗಳು ಆಯ್ಕೆಯಾಗಿ 120 ಕಾಲೇಜುಗಳನ್ನು ಕೈ ಬಿಡಲಾಗಿತ್ತು. ಆದರೇ ಯಾವುದೇ ಪ್ರತಿಭೆಗಳಿಗೆ ಮೋಸವಾಗಬಾರದು ಎಂಬ ಕಾರಣದಿಂದ ಯುವ ಸಂಭ್ರಮವನ್ನು ಒಂದು ದಿನ ಹೆಚ್ಚು ಮಾಡಿ ಅವರಿಗೂ ಅವಕಾಶ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ಯುವ ಸಂಭ್ರಮದಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಕಾರ್ಯಕ್ರಮಗಳು ನಡೆಯಲಿದ್ದು, ಅಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಪ್ರತಿಯೊಬ್ಬರೂ ನೋಡಬೇಕು. ಕಾರ್ಯಕ್ರಮ ನೀಡಲು ಬಂದಿರುವಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಅವರಲ್ಲಿ ಇನ್ನು ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸಬೇಕು ಎಂದು ಹೇಳಿದರು.

ಸಂಸ್ಕೃತಿಯಲ್ಲಿ ಧರ್ಮ ಒಂದು ಭಗವಾಗಿದ್ದು, ಧರ್ಮವೇ ಸಂಸ್ಕೃತಿಯಲ್ಲ. ಎಲ್ಲಾ ಯುವ ಪೀಳಿಗೆಗಳು ಇದನ್ನು ಅರಿತು ಎಲ್ಲರಿಗೂ ಸಮಾನತೆಯನ್ನು ತಂದುಕೊಟ್ಟಿರುವ ಸಂವಿಧಾನದ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಮಾನತೆ ಮತ್ತು ಬ್ರಾತೃತ್ವವನ್ನು ಬೆಳೆಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರ್ ನಾಥ್, ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮೀ ಕಾಂತರೆಡ್ಡಿ, ಜಿಲ್ಲಾ ಪಂಚಾಯತ್ ನ ಮುಖ್ಯಕಾರ್ಯನಿರ್ವಾಣಾಧಿಕಾರಿ ಕೆ.ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News