ಮೈಸೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯರನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು

Update: 2024-09-27 07:37 GMT

ಮೈಸೂರು : ರಾಜ್ಯಾದ್ಯಂತ ಕೋಲಾಹಲ ಎಬ್ಬಿಸಿರುವ ಮುಡಾ ಪ್ರಕರಣ ಸಂಬಂಧ ಸಿಎಂ ಸಿದ್ಧರಾಮಯ್ಯ ವಿರುದ್ಧ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದ ನಂತರ ಇದೇ ಮೊದಲ ಬಾರಿಗೆ ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ಈ ವೇಳೆ ಸಿದ್ಧರಾಮಯ್ಯ ಅವರಿಗೆ ಬೆಂಬಲ ಸೂಚಿಸಲು ಸಾವಿರಾರು ಅಭಿಮಾನಿಗಳು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ತಮ್ಮ ನಾಯಕನನ್ನು ನೋಡಲು ಮುಗಿ ಬಿದ್ದ ಘಟನೆ ನಡೆಯಿತು.

ಸಿದ್ಧರಾಮಯ್ಯ ಕಾರು ಹತ್ತಿ ಅಭಿಮಾನಿಗಳತ್ತ ಕೈ ಬೀಸುತ್ತಿದ್ದಂತೆ ಕಾರಿನ ಮುಂಭಾಗ ಸುತ್ತುವರಿದ ಅಭಿಮಾನಿಗಳು ಸಿದ್ಧರಾಮಯ್ಯರತ್ತ ಕೈ ಬೀಸಿ ಅವರ ಭಾವ ಚಿತ್ರ ಹಿಡಿದು ನಿಮ್ಮ ಹಿಂದೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದರು.

ಮೂರು ದಿನಗಳ ಮೈಸೂರು ಪ್ರವಾಸ ಕೈಗೊಂಡಿರುವ ಸಿಎಂ ಸಿದ್ಧರಾಮಯ್ಯ ಶುಕ್ರವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು‌. ತಮ್ಮ ನಾಯಕ ಮೈಸೂರಿಗೆ ಆಗಮಿಸುತ್ತಿದ್ದಾರೆ ಎಂಬುದನ್ನು ತಿಳಿದ ಅಭಿಮಾನಿಗಳು, ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಬೆಂಬಲ ಸೂಚಿಸಿದರು.

ತಮಟೆ, ನಗಾರಿ ಸೇರಿದಂತೆ ಜಾನಪದ ಕಲಾ ವೈಭವವದೊಂದಿಗೆ ಆಗಮಿಸಿದ್ದ ಅಭಿಮಾನಿಗಳು ಸಿದ್ಧರಾಮಯ್ಯ ಪರ ಘೋಷಣೆಗಳನ್ನು ಕೂಗಿದರು.

ಸಿಎಂ ಸಿದ್ಧರಾಮಯ್ಯ ಏರ್ ಫೊರ್ಟ್‌ ಲಾಂಜ್‌ನಿಂದ ಹೊರಗೆ ಬರುತ್ತಿಂತೆ ಅವರ ಬೆಂಬಲಿಗರು ಜೋರು ಧನಿಯಲ್ಲಿ ಜಯಘೋಷ ಮೊಳಗಿಸಿದರು. ʼಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ ನಿಮ್ಮ ಹಿಂದೆ ಕೋಟ್ಯಾಂತರ ಅಭಿಮಾನಿಗಳು ಇದ್ದಾರೆʼ ಎಂದು ಕೂಗಿದರು.

ಸಿದ್ದರಾಮಯ್ಯ ಅವರು ಅಭಿಮಾನಿಗಳ ಅಭಿಮಾನಕ್ಕೆ ತಲೆದೂಗಿ ಅವರ ಬಳಿಗೆ ಹೋಗಿ ಕೈ ಕೊಟ್ಟು ಕೃತಜ್ಞತೆ ಸಲ್ಲಿಸಿದರು. ಕೆಲವರು ಶಾಲು, ಹಾರ ಹಾಕಿ ನಮಸ್ಕರಿಸಿದರು. ಈ ವೇಳೆ ಅಭಿಮಾನಿಗಳನ್ನು ಪೊಲೀಸರು ನಿಯಂತ್ರಿಸಲು ನೂಕು ನುಗ್ಗಲು ಉಂಟಾಗಿ ಸಿಎಂ ಅಂಗ ರಕ್ಷಕರು ಕೆಳಗೆ ಬಿದ್ದ ಘಟನೆಯೂ ನಡೆಯಿತು.

 

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News