ಅದ್ಧೂರಿ ಜೊತೆಗೆ ಅಚ್ಚುಕಟ್ಟಾದ ದಸರಾ : ಜಿಲ್ಲಾಡಳಿತದ ಶ್ರಮ ಮತ್ತು ಶಿಸ್ತಿಗೆ ಸಿಎಂ ಅಭಿನಂದನೆ
ಮೈಸೂರು : ಅದ್ಧೂರಿ ಮತ್ತು ಅಚ್ಚುಕಟ್ಟಾದ ದಸರಾ ಆಯೋಜಿಸಿದ ಜಿಲ್ಲಾಡಳಿತ ಶ್ರಮ ಮತ್ತು ಶಿಸ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಅಲ್ಲಿಸಿದ್ದಾರೆ.
ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಅರ್ಪಿಸಿದ ಬಳಿಕ ಮುಖ್ಯಮಂತ್ರಿಗಳು, ವಿಜೃಂಭಣೆಯ ದಸರಾ ವೈಭವವನ್ನು ಮೆಚ್ಚಿಕೊಂಡು ಜಿಲ್ಲಾಡಳಿತಕ್ಕೆ ಅಭಿನಂದಿಸಿದರು.
ಕಳೆದ ವರ್ಷ ಭೀಕರ ಬರಗಾಲದ ಕಾರಣದಿಂದ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದ ಸರಳ ದಸರಾವನ್ನು ಆಯೋಜಿಸಲಾಗಿತ್ತು. ಆದರೆ ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿ, ನಿರೀಕ್ಷಿತ ಮಟ್ಟಕ್ಕಿಂತ ಉತ್ತಮ ಬೆಳೆ ಆಗುವ ಲಕ್ಷಣಗಳೂ ಸ್ಪಷ್ಟವಾಗಿವೆ. ಸಾಲದ್ದಕ್ಕೆ ಈ ಬಾರಿ ಜಿಎಸ್‌ಟಿ ಮತ್ತು ತೆರಿಗೆ ಸಂಗ್ರಹವೂ ನಿರಾಸೆ ಮೂಡಿಸಿಲ್ಲ. ಇದು ರಾಜ್ಯದ ಆರ್ಥಿಕತೆ ಆರೋಗ್ಯಕರವಾಗಿ ಏರುಗತಿಯಲ್ಲಿ ಇರುವುದಕ್ಕೆ ಸಾಕ್ಷಿಯಾಗಿದೆ. ಎಲ್ಲವೂ ಒಟ್ಟಾಗಿ ದಸರಾ ಸಂಭ್ರಮವನ್ನು ಹೆಚ್ಚಿಸಿದೆ ಎನ್ನುವ ಸಂತೋಷವನ್ನೂ ವ್ಯಕ್ತಪಡಿಸಿದ್ದಾರೆ.
ದಸರಾ ಪೂರ್ವಭಾವಿ ಸಭೆಗಳಲ್ಲಿ ಕೊಟ್ಟ ಸೂಚನೆ ಮತ್ತು ತೆಗೆದುಕೊಂಡ ನಿರ್ಣಯಗಳನ್ನು ಜಿಲ್ಲಾಡಳಿತ ಶಿಸ್ತುಬದ್ದವಾಗಿ ಜಾರಿಗೊಳಿಸಿದೆ. ಇದೇ ಮೊದಲ ಬಾರಿಗೆ ಯುವ ದಸರಾವನ್ನು ಚಾಮುಂಡಿ ತಪ್ಪಲಿನ ಉತ್ತನಹಳ್ಳಿಯಲ್ಲಿ ಸಂಘಟಿಸಿ ಲಕ್ಷ ಲಕ್ಷ ಮಂದಿ ಸಂಭ್ರಮಿಸಿದರು. ಶಾಸ್ತ್ರೀಯ ಸಂಗೀತ ಪ್ರಕಾರಗಳಿಂದ, ಸಮಕಾಲೀನ ಸಂಗೀತವನ್ನೂ, ಶಾಸ್ತ್ರೀಯ ನೃತ್ಯದಿಂದ ಸಮಕಾಲೀನ ನೃತ್ಯ ಪ್ರಕಾರಗಳು, 20 ಕ್ಕೂ ಹೆಚ್ಚು ತಂಡಗಳು, ನೂರಾರು ಕಲಾವಿದರು ಯುವ ದಸರಾ ಸಡಗರವನ್ನು ಹೆಚ್ಚಿಸಿದ್ದಾರೆ.
ಪಂಜಿನ ಮೆರವಣಿಗೆ ಕೂಡ ಹಳತು ಮತ್ತು ಆಧುನಿಕತೆಯ ಮಿಶ್ರಣವಾಗಿದ್ದು ಈ ಬಾರಿಯ ವಿಶೇಷ. ಅತ್ಯಂತ ಪುರಾತನವಾದ ಪಂಜಿನ ಬೆಳಕಿನ ಜೊತೆಗೆ ಆಕಾಶದಲ್ಲಿ ರಚಿಸಿದ ಅತ್ಯಂತ ಆಧುನಿಕವಾದ 1500 ಡ್ರೋನ್ ಗಳ ಬೆಳಕಿನ ರಂಗೋಲಿ ನೆರೆದಿದ್ದವರನ್ನು ವಿಸ್ಮಯದ ಜೊತೆಗೆ ರಂಜಿಸಿದ್ದಕ್ಕೂ ಸಿಎಂ ಜಿಲ್ಲಾಡಳಿತಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ದಸರಾದ ಅಂತಾರಾಷ್ಟ್ರೀಯ ಖ್ಯಾತಿಯನ್ನು ಹೆಚ್ಚಿಸುವ, ಸಾಂಪ್ರದಾಯಿಕ ಹಿರಿಮೆಯನ್ನು ವಿಸ್ತರಿಸಿದ ಜಿಲ್ಲಾಡಳಿತದ ಶ್ರಮಕ್ಕೆ ಮುಖ್ಯಮಂತ್ರಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಈ ಎಲ್ಲಾ ಸಾರ್ಥಕತೆಗೆ ಕಾರಣವಾದ ಪೌರ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳವರೆಗೆ, ಮಾವುತರಿಂದ ಜಿಲ್ಲಾ ಮಂತ್ರಿಗಳವರೆಗೆ ಪ್ರತಿಯೊಬ್ಬರ ಶ್ರಮ, ಕರ್ತವ್ಯ ಪ್ರಜ್ಞೆ, ವೃತ್ತಿಪರತೆಗೆ ಸಿಎಂ ಸಿದ್ದರಾಮಯ್ಯ ಕೃತಜ್ಞತೆ ಸಲ್ಲಿಸಿದ್ದಾರೆ.