ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಪ್ರಮೋದದೇವಿ ಚಾಲನೆ

Update: 2023-10-16 14:36 GMT

ಶ್ರೀರಂಗಪಟ್ಟಣ: ಮೂರು ದಿನಗಳ ಕಾಲ ನಡೆಯಲಿರುವ ಪಾರಂಪರಿಕ, ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಮೈಸೂರು ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ಸೋಮವಾರ ಚಾಲನೆ ನೀಡಿದರು.

ನಂದಿ ಪೂಜೆ ನಂತರ, ಕಿರಂಗೂರು ಬನ್ನಿಮಂಟಪದ ಬಳಿ ಅಂಬಾರಿಯಲ್ಲಿದ್ದ ಶ್ರೀ ಚಾಮುಂಡೇಶ್ವರಿ ದೇವಿಗೆ ಪ್ರಮೋದದೇವಿ ಒಡೆಯರ್ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ಕೊಟ್ಟರು.

ಚಾಮುಂಡೇಶ್ವರಿ ವಿಗ್ರಹವನ್ನು ಹೊತ್ತ ಮಹೇಂದ್ರ ಆನೆ ಗಂಭೀರವಾಗಿ ಹೆಜ್ಜೆಹಾಕಿ ಸಾಗಿದರೆ, ಆತನ ಅಕ್ಕಪಕ್ಕ ವರಲಕ್ಷ್ಮಿ ಮತ್ತು ವಿಜಯ ಹೆಸರಿನ ಆನೆಗಳು ಹೆಜ್ಜೆಹಾಕಿದವು. ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದವರೆಗೆ ಸುಮಾರು ಎರಡು ಕಿ.ಮೀ. ಜಂಬೂ ಸವಾರಿ ಮೆರವಣಿಗೆ ನಡೆಯಿತು.

ಪೊಲೀಸ್ ಬ್ಯಾಂಡ್, ಅಶ್ವದಳ, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆ ಕೋಲಾಟ, ಗಾರುಡಿ ಗೊಂಬೆ, ತಮಟೆ, ಕಂಸಾಳೆ, ಡೊಳ್ಳು ಕುಣಿತ, ಸೋಮನ ಕುಣಿತ, ಒನಕೆ ಕುಣಿತ, ರಂಗದ ಕುಣಿತ, ಕೋಳಿ ನೃತ್ಯ, ಕಹಳೆ, ನಾಸಿಕ್ ಡೋಲ್, ದೊಡ್ಡ ಆಂಜನೇಯ, ಪಟ್ಟದ ಕುಣಿತ, ಯಕ್ಷಗಾನ ನೃತ್ಯ, ಹುಲಿವೇಷ, ಹಾಲಕ್ಕಿ ಸುಗ್ಗಿ ಕುಣಿತ, ಕೇರಳ ಚಂಡೆ, ಜಗ್ಗಲಿಗೆ, ಮಹಿಳಾ ಡೊಳ್ಳು ಕುಣಿತ ಸೇರಿದಂತೆ ಹಲವು ಕಲಾ ತಂಡಗಳ ಪ್ರದರ್ಶನ ಮೆರವಣಿಗೆಗೆ ಮೆರಗು ನೀಡಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗೃಹಲಕ್ಷಿ ಯೋಜನೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಸ್ತಬ್ಧಚಿತ್ರ, ಅರೋಗ್ಯ ಇಲಾಖೆಯ ಹೃದಯಘಾತ ತ್ವರಿತ ಚಿಕಿತ್ಸೆಗೆ ಸ್ಟೆಮಿ ಯೋಜನೆ ಕುರಿತು ಸ್ತಬ್ಧಚಿತ್ರ, ರೇಷ್ಮೆ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ವತಿಯಿಂದ ಸರಕಾದರದ ವಿವಿಧ ಯೋಜನೆಗಳನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆದವು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಇತರ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News