"ಹಿಂದೂಗಳು ತಲ್ವಾರ್ ಹಿಡಿಯಬೇಕಾಗುತ್ತದೆ" : ಮಾಜಿ ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ

Update: 2024-09-13 10:19 GMT

ಮೈಸೂರು : "ನಾಗಮಂಗಲದಲ್ಲಿ ಗಣೇಶೋತ್ಸವದ ವೇಳೆ ಮುಸ್ಲಿಮರು ಪೆಟ್ರೋಲ್ ಬಾಂಬ್, ತಲ್ವಾರ್‌ಗಳನ್ನು ಹಿಡಿದುಕೊಂಡು ಓಡಾಡಿದ್ದಾರೆ. ಸರಕಾರ ಇದನ್ನು ಕಿತ್ತುಕೊಳ್ಳದಿದ್ದರೆ ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಹಿಂದೂಗಳು ಕೈಯಲ್ಲಿ ಪೆಟ್ರೋಲ್ ಬಾಂಬ್ ಹಾಗೂ ತಲ್ವಾರ್ ಗಳನ್ನು ಹಿಡಿದುಕೊಳ್ಳಬೇಕಾಗುತ್ತದೆ. ಇದರಿಂದ ಕಾನೂನು ಸುವ್ಯವಸ್ಥೆ ಹಾಲಾದರೆ ಸರಕಾರವೇ ಹೊಣೆಯಾಗಬೇಕಾಗುತ್ತದೆ" ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ಅದ್ದೂರಿಯಾಗಿ ನಡೆಯುವುದಿದೆ. ಸರಕಾರ ಪುಂಡರ ಮೇಲೆ ನಿಯಂತ್ರಣ ಹೇರಬೇಕು. ಇಲ್ಲದಿದ್ದರೆ ನಮ್ಮ ರಕ್ಷಣೆಯ ಜವಾಬ್ದಾರಿ ನಮಗೆ ಗೊತ್ತಿದೆ" ಎಂದು ಹೇಳಿದರು.

ನಾಗಮಂಗಲದಲ್ಲಿ ಅಮಾಯಕ ಹಿಂದೂಗಳನ್ನು ಬಂಧಿಸಿದರೆ ನಾವು ಮತ್ತೆ ಅಲ್ಲಿಗೂ ಬರುತ್ತೇವೆ. ಪೊಲೀಸ್ ಠಾಣೆಗೂ ಬರುತ್ತೇವೆ. ಅಲ್ಲಿ ಗಲಾಟೆ ಶುರು ಮಾಡಿದವರ ಮೇಲೆ ಕಠಿಣ ಕ್ರಮ ಆಗಬೇಕು. ಗಲಾಟೆ ಶುರು ಮಾಡಿದವರನ್ನು ಬಿಟ್ಟು ಅದಕ್ಕೆ ಪ್ರತಿಕ್ರಿಯೆ ಕೊಟ್ಟವರ ಮೇಲೆ ಕ್ರಮವಾದರೆ ಅದರ ಅರ್ಥವೇನು? ಈ ಸರಕಾರ ಪೊಲೀಸರಿಗೆ ಕ್ರಮ ಜರುಗಿಸುವ ಸ್ವಾತಂತ್ರ್ಯವನ್ನೇ ಕೊಟ್ಟಿಲ್ಲ. ತಾಲಿಬಾನ್ ಮನಸ್ಥಿತಿಯಂತೆ ಪೊಲೀಸರನ್ನು ನಿಯಂತ್ರಿಸುತ್ತಿದ್ದಾರೆ. ಆಳುವವರು ಮೊದಲು ನೆಟ್ಟಗಿರಬೇಕು. ಅವರೇ ಮುಸ್ಲಿಮರ ಓಲೈಕೆಗಿಳಿದರೆ ಇಂತಹ ಸ್ಥಿತಿ ಬರುತ್ತದೆ" ಎಂದರು.

ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ನಡೆಸಲು ಬಿಡುವುದಿಲ್ಲ:

ʼಯಾವುದೇ ಕಾರಣಕ್ಕೂ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಬಿಡುವುದಿಲ್ಲ. ನಾನು ಸಂಸದ ಆಗಿರಲಿ, ಇಲ್ಲದಿರಲಿ ತಾಯಿ ಚಾಮುಂಡೇಶ್ವರಿಗೆ ಅವಮಾನ ಆಗುವುದಕ್ಕೆ ಬಿಡುವುದಿಲ್ಲ. ಯಾರ ನಿಲುವು ಏನೇ ಇರಲಿ. ನನ್ನ ನಿಲುವು ಮಾತ್ರ ಯಾವತ್ತಿಗೂ ಒಂದೇ’ ಎಂದರು.

ಮಹಿಷ ದಸರಾ ನಡೆಸುವವರು ಅವರ ಮನೆಗಳಲ್ಲಿ ಮಾಡಿಕೊಳ್ಳಲಿ. ನಮಗೆ ಮಹಿಷನಂತಹ ಮಕ್ಕಳೇ ಹುಟ್ಟಲಿ ಎಂದು ದಿನವೂ ಪೂಜಿಸಲಿ. ಅದಕ್ಕೆ ನಮ್ಮದೇನೂ ವಿರೋಧವಿಲ್ಲಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News