ಮೈಸೂರು: ಶಾಸಕ ಮುನಿರತ್ನ ಹೇಳಿಕೆ ಖಂಡಿಸಿ ದಲಿತರ ಪ್ರತಿಭಟನೆ
ಮೈಸೂರು: ಶಾಸಕ ಮುನಿರತ್ನ ಅವರ ಆಡಿಯೋ ಹೇಳಿಕೆ ಖಂಡಿಸಿ ದಲಿತರು ರಸ್ತೆಗಿಳಿದು ಪ್ರತಿಭಟನೆ ನಡೆಸಿ ಮಾನವಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಲ್ಲಾಳ್ ವೃತ್ತದಲ್ಲಿ ಶನಿವಾರ ಜಮಾಯಿಸಿದ ಪ್ರತಿಭಟನಾಕಾರರು, ಶಾಸಕ ಮುನಿರತ್ನ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದರು.
ಇದೇ ವೇಳೆ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ಮಾತನಾಡಿ, ಸಂವಿಧಾನದ ಘನತೆ ಎತ್ತಿ ಹಿಡಿಯುತ್ತೇನೆ ಎಂದು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿ, ಎಲ್ಲಾ ಜಾತಿ ಧರ್ಮದವರನ್ನು ಸಮಾನರಾಗಿ ಕಾಣುತ್ತೇನೆ ಎಂದು ಪ್ರಮಾಣ ಮಾಡಿದ ಶಾಸಕ ಮುನಿರತ್ನ ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ಜೊತೆ ಎತ್ತಿಕಟ್ಟಿ ಅಸ್ಪೃಶ್ಯ ಮನೋಭಾವದಿಂದ ನೋಡಿದ್ದಾರೆ. ಜೊತಗೆ ಪರಿಶಿಷ್ಟ ಜಾತಿ ಕುರಿತು ತಚ್ಛವಾಗಿ ಮಾತನಾಡಿ ಇವರ ಮನಸ್ಥಿತಿಯನ್ನು ಹೊರಹಾಕಿದ್ದಾರೆ. ಇವರ ವಿರುದ್ಧ ಎಸ್ಸಿ,ಎಸ್ಟಿ ದೌರ್ಜನ್ಯ ಕಾಯ್ದೆ ದಾಖಲಿಸಿ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ದಲಿತ ಮುಖಂಡ, ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಸಂವಿಧಾನದ ಘನತೆ ಗೌರವ ಗೊತ್ತಿಲ್ಲ ಒಬ್ಬ ಅನಾಗರೀಕ ಮುನಿರತ್ನ ಶಾಸಕನಾಗಿದ್ದಾನೆ. ಈತನ ಹೇಳಿಕೆ ಕೇಳಿದರೆ ಅಸಹ್ಯ ಉಟ್ಟಿಸುತ್ತದೆ. ದಲಿತ ಸಮುದಾಯದ ಕುರಿತು ಈತ ಮಾತನಾಡಿರುವ ರೀತಿ ದಲಿತರ ಆಕ್ರೋಶಕ್ಕೆ ಕಾರಣವಾಗಿದೆ.ಪದೇ ಪದೇ ಒಂದು ಸಮುದಾಯವನ್ನು ಹೀಯಾಳಿಸಿ ಅಪಮಾನ ಮಾಡಿರುವ ಈತನನನ್ನು ಬಿಜೆಪಿ ಪಲ್ಷದಿಂದ ಉಚ್ಚಾಟಿಸಬೇಕು, ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಗಡಿಪಾರು ಮಾಡಬೇಕು. ಇನ್ನೆರಡು ದಿನ ಕಾಲಾವಕಾಶ ನೀಡುತ್ತೇವೆ.ಇಲ್ಲದಿದ್ದರೆ ಮೈಸೂರಿನಿಂದಲೇ ರಾಜ್ಯಾದ್ಯಂತ ಹೋರಾಟ ಪ್ರಾರಂಭ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಆದಿಕರ್ನಾಟಕ ಮಹಾಸಭಾದ ಸುನೀಲ್, ದಸಂಸ ಮುಖಂಡ ಮಣಿಯಯ್ಯ, ಆಟೋ ಪುಟ್ಟರಾಜು, ಲೇಖಕ ಸಿದ್ಧಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.