ಅಂಜಲಿ ಹತ್ಯೆ ಪ್ರಕರಣ | ಪೊಲೀಸ್ ಇಲಾಖೆ ಸತ್ತಿದೆಯೋ, ಬದುಕಿದೆಯೋ ತಿಳಿಯುತ್ತಿಲ್ಲ : ಆರ್.ಅಶೋಕ್
ಮೈಸೂರು : ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯಾಗಿ ಒಂದು ತಿಂಗಳು ಕಳೆಯುವಾಗಲೇ ಅಂಜಲಿ ಎಂಬ ಯುವತಿ ಹತ್ಯೆಯಾಗಿದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಸತ್ತಿದೆಯೋ, ಬದುಕಿದೆಯೋ ಒಂದೂ ತಿಳಿಯುತ್ತಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಹೆಣ್ಣು ಮಕ್ಕಳು ಸರಣಿ ಕೊಲೆಯಾಗುತ್ತಿದೆ. ಇದರ ಜೊತೆಗೆ ಲವ್ ಜಿಹಾದ್ ಕೂಡ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಈ ಎಲ್ಲ ಸಮಸ್ಯೆಗಳ ನಡುವೆ ಬರಗಾಲದಿಂದಾಗಿ ಜನರು ತೊಂದರೆಗೊಳಗಾಗಿದ್ದಾರೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಐದು ವರ್ಷವೂ ಬರಗಾಲ ಬಂದಿತ್ತು. ಬರಗಾಲದ ಪರಿಹಾರವನ್ನೂ ಕೇಂದ್ರ ಸರ್ಕಾರ ನೀಡಿದೆ. ತಮ್ಮ ಪಾಲಿನ ಹಣವಾಗಿ ಒಂದು ನಯಾಪೈಸೆಯನ್ನೂ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿಲ್ಲ" ಎಂದು ದೂರಿದರು.
ʼಹಾಲಿನ ಪ್ರೋತ್ಸಾಹಧನ 700 ಕೋಟಿ ರೂ. ಉಳಿಸಿಕೊಂಡಿದ್ದಾರೆ. ಆಂಬ್ಯುಲೆನ್ಸ್ ಚಾಲಕರು, ಗುತ್ತಿಗೆ ಸಿಬ್ಬಂದಿಗೆ ಸಂಬಳ ಪಾವತಿಯಾಗಿಲ್ಲ. ಕೇರಳಕ್ಕೆ ಬಂದ ಪರಿಸ್ಥಿತಿಯೇ ಇನ್ನು ಕರ್ನಾಟಕಕ್ಕೆ ಬರಲಿದೆ. ಪಾಕಿಸ್ತಾನದಲ್ಲಿ ಅಕ್ಕಿ, ಬೇಳೆ, ಗೋಧಿ ಬೆಲೆ 2 ಸಾವಿರ ರೂ.ಗೆ ತಲುಪಿದೆ. ಚಹ ಕುಡಿದರೆ 500 ರೂ. ಕೊಡಬೇಕು. ಸಿದ್ದರಾಮಯ್ಯನವರ ಸರ್ಕಾರ ಇನ್ನೂ ಇದ್ದರೆ ಪಾಕಿಸ್ತಾನದ ಆರ್ಥಿಕತೆ ಕರ್ನಾಟಕಕ್ಕೆ ಬರಲಿದೆʼ ಎಂದು ಹೇಳಿದರು.
ವಿದ್ಯಾವಂತ ಮತದಾರರು
ಈಗ ವಿಧಾನಪರಿಷತ್ ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಇಲ್ಲಿ ವಿದ್ಯಾವಂತರೇ ಇದ್ದಾರೆ. ಇದು ಕೈ ಮುಗಿದುಕೊಂಡು ಕೇಳುವ ಮತದಾನ ಅಲ್ಲ. ಎಲ್ಲರನ್ನೂ ಸಂಪರ್ಕಿಸಿ ಮನ ಒಲಿಸಬೇಕಾಗುತ್ತದೆ. ನಾವು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದು, ಮತದಾರರು ಬಿಜೆಪಿ-ಜೆಡಿಎಸ್ ಮೈತ್ರಿಗೆ ಮತ ನೀಡಿ ಎಂದು ಮನವಿ ಮಾಡಿದರು.