ಸಿಎಂ‌ ಪತ್ನಿ ಪಾರ್ವತಿ ಅವರಿಂದ ರಸ್ತೆಗೆ ಮೀಸಲಿದ್ದ ಜಾಗ ಕ್ರಯ : ಆರ್‌ಟಿಐ ಕಾರ್ಯಕರ್ತ ಗಂಗರಾಜು ಆರೋಪ

Update: 2024-10-19 14:26 GMT

ಸಿದ್ದರಾಮಯ್ಯ(PTI)

ಮೈಸೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿಯವರು ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ರಸ್ತೆಗೆಂದು ಮೀಸಲಿಟ್ಟಿದ್ದ ಜಾಗವನ್ನು ಸೇರಿಸಿ ಕ್ರಯ ಮಾಡಿಸಿಕೊಂಡಿದ್ದಾರೆ. ಆರ್‌ಟಿಐ. ಮೂಲಕ ಮಾಹಿತಿ ಕೇಳಿದ ತಕ್ಷಣ ಆ.31ರಂದು ತಿದ್ದುಪಡಿ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ದಾಖಲೆ ಬಿಡುಗಡೆ ಮಾಡಿದ್ದಾರೆ.

ಶನಿವಾರ ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಹೆಬ್ಬಾಳ ಗ್ರಾಮದ ಸರ್ವೆ 445ರಲ್ಲಿ 20 ಗುಂಟೆ ಜಾಗವನ್ನು ಪಾರ್ವತಿಯವರು ಎ.ಎಸ್.ಗಣೇಶ ಎಂಬುವರಿಂದ 2023ರ ಸೆ.29ರಂದು 1.85 ಕೋಟಿಗೆ ಖರೀದಿಸಿದ್ದರು. ಒಟ್ಟು 20 ಸಾವಿರ ಚದರ ಅಡಿಯ ನಿವೇಶನ ಇದಾಗಿದೆ. ಇದರಲ್ಲಿ 8 ಸಾವಿರ ಚ.ಅಡಿ ಜಾಗವನ್ನು ಈಗಾಗಲೇ ಹಿಂದಿನ ಮಾಲೀಕರು ಪ್ರಾಧಿಕಾರಕ್ಕೆ ರಸ್ತೆ ಹಾಗೂ ನೀರಿನ ಪೈಪ್ ಲೇನ್‌ಗಾಗಿ ಬಿಟ್ಟುಕೊಟ್ಟಿದ್ದರು. ಆದರೆ ಪಾರ್ವತಿ ಅವರು ಅದನ್ನೂ ಸೇರಿಸಿ, ತಮ್ಮ ಹೆಸರಿಗೆ ಕ್ರಯ ಮಾಡಿಸಿಕೊಂಡಿದ್ದರುʼ ಎಂದು ಗಂಗರಾಜು ಆರೋಪಿಸಿದರು.

ʼನಾನು ಈ ಬಗ್ಗೆ ಆರ್‌ಟಿಐ ಅಡಿ ದಾಖಲೆ ಕೋರಿ ಮಾಹಿತಿ ಸಲ್ಲಿಸಿದ್ದೆ. ಇದರ ಮಾಹಿತಿ ತಿಳಿಯುತ್ತಲೇ ಪಾರ್ವತಿಯವರು ಇದೇ ವರ್ಷ ಆ.30ರಂದು ಇದೇ ಆಸ್ತಿಗೆ ತಿದ್ದುಪಡಿ ಕ್ರಯ ಮಾಡಿಕೊಂಡಿದ್ದಾರೆ. ಈ ತಿದ್ದುಪಡಿ ಕ್ರಯ ಮಾಡಿಸಿಕೊಂಡು 8900 ಚ.ಅಡಿ ಜಾಗವನ್ನು ಮುಡಾಕ್ಕೆ ಬಿಟ್ಟುಕೊಟ್ಟಿದ್ದಾರೆʼ ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News