ಅಸ್ಪೃಶ್ಯತೆ ಆಚರಿಸಿದ ಮೈಸೂರು ವಿವಿ ಪ್ರಾಧ್ಯಾಪಕಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

Update: 2024-01-03 17:18 GMT

ಮೈಸೂರು: ಅಸ್ಪಶ್ಯತೆ ಆಚರಿಸಿದ ಮೈಸೂರು ವಿಶ್ವವಿದ್ಯಾನಿಲಯದ ಸೂಕ್ಷ್ಮಜೀವಶಾಸ್ತ್ರದ ಪ್ರಾಧ್ಯಾಪಕಿ ಡಾ.ಶುಭಗೋಪಾಲ್ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಬುಧವಾರ ಮಾನಸಗಂಗೋತ್ರಿಯ ಕ್ಲಾಕ್ ಟವರ್ ಎದುರು ಮಾನವ ಸರಪಳಿ ರಚಿಸಿದ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾನಿಯದಲ್ಲಿ ನಡೆಯುತ್ತಿರುವ ಅಸ್ಪಶ್ಯತೆ ಆಚರಣೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು.

ಇದಕ್ಕೂ ಮುನ್ನ ಸೂಕ್ಷ್ಮ ಜೀವಶಾಸ್ತ್ರ ವಿಭಾಗದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮನುವಾದಿ ಪ್ರಾಧ್ಯಾಪಕಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿದರು. ಗಾಯಕ ಶೇಷಣ್ಣ ಕ್ರಾಂತಿ ಗೀತೆ ಹಾಡಿದರು. ವಿದ್ಯಾರ್ಥಿಗಳು ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸೂಕ್ಷ್ಮಜೀವ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಶುಭಗೋಪಾಲ್ ತನ್ನ ಮಾರ್ಗದರ್ಶನದಲ್ಲಿ ಪಿಎಚ್.ಡಿ ಸಂಶೋಧನೆ ನಡೆಸುತ್ತಿರುವ ಸಂಶೋಧಕಿಯ ಮೇಲೆ ನಿಂತರವಾಗಿ ಜಾತಿಯನ್ನು ಉದ್ದೇಶಿಸಿ ಕೀಳಾಗಿ ನಡೆಸಿಕೊಲ್ಳುವುದು, ಜಾತಿ ಹೆಸರಿನಲ್ಲಿ ನಿಂದಿಸುತ್ತ ಆರ್ಥಿಕವಾಗಿ ಶೋಷಿಸಿದ್ದಾರೆ.

ಈ ಕುರಿತು ಹಲವು ಬಾರಿ ದೂರು ನೀಡಿರುವ ಸಂಶೋಧನ ವಿದ್ಯಾರ್ಥಿನಿಗೆ ನ್ಯಾಯ ದೊರೆತಿಲ್ಲ. ಬದಲಿಗೆ ವಿವಿಯ ಆಡಳಿತ ಮಂಡಳಿಯವರು ಮಾರ್ಗದರ್ಶಕರನ್ನು ಬದಲಿಸಿಕೊಳ್ಳುವಂತೆ ಸಲಹೆ ಕೊಟ್ಟಿದ್ದಾರೆ. ಪೊಲೀಸ್ ಠಾಣೆಯನ್ನು ದೂರು ದಾಖಲಾಗಿದ್ದರೂ ಅಮಾನತ್ತಿನಲ್ಲಿ ಇಡದೆ ವಿಶ್ವವಿದ್ಯಾನಿಲಯ ಅಸ್ಪಶ್ಯತಾಚರಣೆಗೆ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಪ್ರತಿಭಟನಾ ವಿದ್ಯಾರ್ಥಿಗಳು ಆರೋಪಿಸಿದರು.

ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ಇಂತಹದ್ದೇ ಕಾರಣಕ್ಕೆ ನೇಣುಬಿಗಿದು ಆತಹತ್ಯೆ ಮಾಡಿಕೊಂಡ ರೋಹಿತ್ ವೇಮುಲಾ ಅಂಬೇಡ್ಕರರನ್ನು ಓದಲು ಬಯಸಿದ ವಿದ್ಯಾರ್ಥಿಗಳಿಗೆ ಸ್ವಲ್ಪ ವಿಷ ಹಾಗೂ ಹಗ್ಗವನ್ನು ಕೊಡುವಂತೆ ಹೇಳಿದ್ದು ಈಗ ಮೈಸೂರು ವಿವಿಗೂ ಅನ್ವಯಿಸುತ್ತದೆ ಎಂದು ಸಂಶೋಧನಾ ವಿದ್ಯಾರ್ಥಿ ಪ್ರದೀಪ್ ಮುಮಡಿ ತಿಳಿಸಿದರು.

ದಲಿತ ವಿದ್ಯಾರ್ಥಿ ಜಿಲ್ಲಾಧ್ಯಕ್ಷ ವಿಶ್ವಪ್ರಸಾದ್, ರಾಜ್ಯ ಸಂಶೋಧಕರ ವೇದಿಕೆ ರಾಜ್ಯಾಧ್ಯಕ್ಷ ರಾಜೇಶ್ ಚಾಕನಹಳ್ಳಿ, ಸಂಶೋಧಕರ ಸಂಘದ ಅಧ್ಯಕ್ಷ ಮಹೇಶ್, ದಲಿತ ವಿದ್ಯಾರ್ಥಿ ಒಕ್ಕೂಟದ ಸಚಿನ್ ಬಿ, ಗೌರವಾಧ್ಯಕ್ಷ ಗಿರೀಶ್ ಬೆಂಡರವಾಡಿ, ಕಾರ್ಯದರ್ಶಿ ನವೀನ್ ಕೋಳೂರು, ಸಂಶೋಧಕ ಗೌತಮ್ ಶಾಕ್ಯ ಮುಂತಾದವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News