ಹಿರಿಯ ರಂಗಕರ್ಮಿ ನ.ರತ್ನ ನಿಧನ

Update: 2024-06-19 05:22 GMT

ಮೈಸೂರು, ಜೂ.19: ಹಿರಿಯ ರಂಗಕರ್ಮಿ ನ.ರತ್ನ (89) ಹೃದಯಾಘಾತದಿಂದ ಬುಧವಾರ ಬೆಳಗ್ಗೆ ಸರಸ್ವತಿಪುರಂನ ನಿವಾಸದಲ್ಲಿ ನಿಧನರಾದರು.

ಮೃತರು ಪತ್ನಿ ಪುತ್ರ, ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ತಮಿಳುನಾಡಿನ ಚಿದಂಬರಂನಲ್ಲಿ ಡಾ.ಎ.ಎಂ.ನಟೇಶ್– ವಿಠ್ಠೋಬಾಯಿ ಅಮ್ಮಾಳ್ ದಂಪತಿ ಪುತ್ರರಾಗಿ 1934ರ ಡಿ.12ರಂದು ಜನಿಸಿದ ನ.ರತ್ನ, ಮೈಸೂರು ಹಾಗೂ ಅಮೆರಿಕದಲ್ಲಿ ಶಿಕ್ಷಣ ಪಡೆದರು.

ವೃತ್ತಿಯಲ್ಲಿ ವಾಕ್ ಶ್ರವಣ ಚಿಕಿತ್ಸಾ ತಜ್ಞರಾಗಿದ್ದ ಇವರು 1966ರಲ್ಲಿ ಆಯಿಷ್ ಸ್ಥಾಪನೆಯಾದಾಗ ಪ್ರಥಮ ನಿರ್ದೇಶಕರಾಗಿ ನೇಮಕಗೊಂಡಿದ್ದರು. 1985–87ರಲ್ಲಿ ಅಲಿ ಯವರ್ ಜಂಗ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹಿಯರಿಂಗ್ ಹ್ಯಾಂಟಿಕ್ಯಾಪ್ಟ್ ನ ನಿರ್ದೇಶಕರಾಗಿದ್ದರು.

ಮೈಸೂರಿನಲ್ಲಿ ಸಮತೆಂತೊ (ಸರಸ್ವತಿಪುರಂನ ಮಧ್ಯದ ತೆಂಗಿನ ತೋಪು) ರಂಗ ತಂಡ ಕಟ್ಟಿ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಎಲ್ಲಿಗೆ ಮತ್ತು ಇತರ ಕತೆಗಳು, ಬೊಂತೆ, ಗೋಡೆ ಬೇಕೆ ಗೋಡೆ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಪುನರ್ಜನ್ಮ, ಭಿನ್ನ ಬೆನಕ, ಬೋಳಾಚಾರಿಗೆ ನಮನ ಮೊದಲಾದ ರೇಡಿಯೊ ನಾಟಕಗಳನ್ನು ರಚಿಸಿದ್ದಾರೆ. 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

2005ರಲ್ಲಿ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, 2013ರಲ್ಲಿ ರಾಜ್ಯೋತ್ಸವ, ಎಂ.ಎನ್.ರಾಯ್ ಪ್ರಶಸ್ತಿ, ಬಿ.ವಿ. ಕಾರಂತ ಪ್ರಶಸ್ತಿ, ಹೆಲನ್ ಕೆಲರ್ ಸಹಿತ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

ವಿಮರ್ಶಕ ಎ.ಕೆ.ರಾಮಾನುಜನ್, ಲೇಖಕ ಯು.ಆರ್.ಅನಂತಮೂರ್ತಿ ಅವರ ಒಡನಾಡಿಯಾಗಿದ್ದರು.

ಮೃತರ ಅಂತ್ಯಕ್ರಿಯೆ ಮೈಸೂರಿನಲ್ಲಿ ಇಂದು ಸಂಜೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News