‘ಅನುಮತಿ ಪಡೆಯದೆ ಮರ ಕಡಿಯುವುದು ಕಾನೂನು ಉಲ್ಲಂಘನೆ ಎಂಬ ಅರಿವು ಇರಲಿಲ್ಲವೇ?’: ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಆಕ್ರೋಶ
ಬೆಂಗಳೂರು: ‘ಪ್ರತಾಪ ಸಿಂಹ ಅವರೇ, ತಮ್ಮ ಪ್ರತಾಪ ಬ್ಯಾರಿಕೇಡ್ ಹಾರುವುದರಲ್ಲಿ ಅಷ್ಟೇ ಅಲ್ಲ, ವಾಸ್ತವಿಕ ಪ್ರಶ್ನೆಗಳಿಗೆ ವಿಷಯಾಂತರ ಮಾಡದೆ ನೇರವಾಗಿ ಉತ್ತರಿಸುವುದರಲ್ಲೂ ನಿಮ್ಮ ಪ್ರತಾಪ ತೋರಿಸಿ. ನಿಮ್ಮ ಸಹೋದರ ಜಮೀನು ಗುತ್ತಿಗೆ ಪಡೆದಿದ್ದು ನಿಜವಲ್ಲವೇ?’ ಎಂದು ಕಾಂಗ್ರೆಸ್ ಖಾರವಾಗಿ ಪ್ರಶ್ನಿಸಿದೆ.
ಸೋಮವಾರ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ನಿಜಕ್ಕೂ ಶುಂಠಿ ಬೆಳೆಯಲು ಗುತ್ತಿಗೆ ಪಡೆದಿದ್ದೋ ಅಥವಾ ಅಲ್ಲಿದ್ದ ಬೆಲೆಬಾಳುವ ಮರಗಳನ್ನು ಲಪಟಾಯಿಸಲು ಗುತ್ತಿಗೆ ಪಡೆದಿದ್ದೋ?. ಮರಗಳನ್ನು ಕಡಿದು ಸಾಗಿಸಲು ಜೆಸಿಬಿ, ಹಿಟಾಚಿಗಳನ್ನು ಕಳಿಸಿದ್ದು ನಿಮ್ಮ ತಮ್ಮನೇ ಅಲ್ಲವೇ?, ಅರಣ್ಯ ಭೂಮಿಯಾಗಲಿ, ಖಾಸಗಿ ಭೂಮಿಯಾಗಲಿ ಅನುಮತಿ ಪಡೆಯದೆ ಮರಗಳನ್ನು ಕಡಿಯುವುದು ಕಾನೂನು ಉಲ್ಲಂಘನೆ ಎಂಬ ಸಾಮಾನ್ಯ ಅರಿವು ಇರಲಿಲ್ಲವೇ?’ ಎಂದು ವಾಗ್ದಾಳಿ ನಡೆಸಿದೆ.
‘ಕಾನೂನು ಉಲ್ಲಂಘಿಸಿದ್ದರೂ ಪ್ರತಾಪ್ ಸಿಂಹನ ತಮ್ಮ ಎಂದು ಸುಮ್ಮನಿರಬೇಕಿತ್ತೇ?, ಪಲಾಯನವಾದಿ ಪ್ರತಾಪ್ ಸಿಂಹರೇ, ಸಂಸತ್ ದಾಳಿಕೋರರಿಗೆ ಪಾಸ್ ಕೊಟ್ಟಿದ್ದೇಕೆ ಎಂದು ಕೇಳಿದರೆ ಚಾಮುಂಡೇಶ್ವರಿಗೆ ಗೊತ್ತು ಅಂತೀರಿ, ನಿಮ್ಮ ತಮ್ಮ ಕೋಟ್ಯಂತರ ರೂ.ಬೆಲೆಬಾಳುವ ಮರಗಳನ್ನು ಕಡಿದಿದ್ದೇಕೆ ಎಂದು ಕೇಳಿದರೆ ಡಾ.ಯತೀಂದ್ರ ಕಡೆ ಕೈ ತೋರಿಸುತ್ತೀರಿ. ತಮ್ಮ ಗುರು ಮೋದಿಯವರಂತೆ ವಿಷಯಾಂತರ ಮಾಡುವಲ್ಲಿ, ದಿಕ್ಕು ತಪ್ಪಿಸುವಲ್ಲಿ ತಾವೂ ‘ಬ್ರಿಲಿಯಂಟ್ ಪೊಲಿಟಿಷಿಯನ್’ ಅಲ್ಲವೇ ಪ್ರತಾಪ್ ಸಿಂಹ ಅವರೇ?’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.