ರೊಹಿಂಗ್ಯಾರ ಬಂಧನ, ಬಲವಂತದ ಗಡಿಪಾರು ನಿಲ್ಲಿಸಿ | ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನಾ ಸಮಿತಿ ಭಾರತಕ್ಕೆ ಕರೆ

Update: 2024-07-03 15:26 GMT

PC : hrw.org

ಹೊಸದಿಲ್ಲಿ : ರೊಹಿಂಗ್ಯಾ ನಿರಾಶ್ರಿತರ ಸ್ವೇಚ್ಛಾಚಾರದ ಬಂಧನ ಮತ್ತು ಬಲವಂತದ ಗಡಿಪಾರನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನಾ ಸಮಿತಿಯು ಮಂಗಳವಾರ ಭಾರತಕ್ಕೆ ಕರೆ ನೀಡಿದೆ.

ರೊಹಿಂಗ್ಯಾ ನಿರಾಶ್ರಿತರನ್ನು ಮರಳಿ ಮ್ಯಾನ್ಮಾರ್ಗೆ ಕಳುಹಿಸುವ ಮೂಲಕ ಭಾರತವು ಅವರನ್ನು ಗಂಭೀರ ಮಾನವಹಕ್ಕುಗಳ ದಮನಕ್ಕೆ ಒಳಪಡಿಸುತ್ತಿದೆ ಎಂದು ಅದು ಎಚ್ಚರಿಸಿದೆ.

ರೊಹಿಂಗ್ಯಾ ಜನಾಂಗೀಯ ಗುಂಪು ಹೆಚ್ಚಾಗಿ ಮುಸ್ಲಿಮರನ್ನು ಒಳಗೊಂಡಿದೆ. ಅವರಿಗೆ ಬೌದ್ಧ ಬಾಹುಳ್ಯದ ಮ್ಯಾನ್ಮಾರ್ನಲ್ಲಿ ಪೌರತ್ವವನ್ನು ನಿರಾಕರಿಸಲಾಗಿದೆ ಮತ್ತು ಅಕ್ರಮ ವಲಸಿಗರು ಎಂಬುದಾಗಿ ವಗೀಕರಿಸಲಾಗಿದೆ.

ರೊಹಿಂಗ್ಯಾ ನಿರಾಶ್ರಿತರು ಮ್ಯಾನ್ಮಾರ್ನಲ್ಲಿ ನಡೆದ ಸರಕಾರಿ ಪ್ರಾಯೋಜಿತ ಜನಾಂಗೀಯ ಹತ್ಯೆ ಕಾರ್ಯಾಚರಣೆಯ ಸಂತ್ರಸ್ತರಾಗಿದ್ದಾರೆ.

2018 ಮತ್ತು 2022ರ ನಡುವಿನ ಅವಧಿಯಲ್ಲಿ ರೊಹಿಂಗ್ಯಾ ನಿರಾಶ್ರಿತರನ್ನು ಭಾರತದಿಂದ ಬಲವಂತವಾಗಿ ಗಡಿಪಾರು ಮಾಡಿರುವ ಹಲವು ವರದಿಗಳಿಂದ ತಾನು ಕಳವಳಗೊಂಡಿರುವುದಾಗಿ ವಿಶ್ವಸಂಸ್ಥೆಯ ಸಮಿತಿ ಹೇಳಿದೆ.

ರೊಹಿಂಗ್ಯ ನಿರಾಶ್ರಿತರ ಬಲವಂತದ ಗಡಿಪಾರನ್ನು ಭಾರತ ಮುಂದುವರಿಸಿದರೆ, ಆಶ್ರಯ ಪಡೆದಿರುವ ವ್ಯಕ್ತಿಗಳನ್ನು ಅವರು ತೊರೆದು ಬಂದಿರುವ ದೇಶಕ್ಕೆ ವಾಪಸ್ ಕಳಹಿಸುವುದನ್ನು ನಿಷೇಧಿಸುವ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಮಂಗಳವಾರ ವಿಶ್ವಸಂಸ್ಥೆಯ ಸಮಿತಿ ತಿಳಿಸಿದೆ.

ಅಂತಿಮ ಕ್ರಮವಾಗಿ ಮಾತ್ರ ಹಾಗೂ ಸಾಧ್ಯವಿರುವಷ್ಟು ಕಡಿಮೆ ಅವಧಿಗೆ ಬಂಧಿಸುವಂತೆ ಸಮಿತಿಯು ಭಾರತ ಸರಕಾರಕ್ಕೆ ಕರೆ ನೀಡಿದೆ.

ಬಂಧಿತ ರೊಹಿಂಗ್ಯಾಗಳಿಗೆ ವಕೀಲರನ್ನು ಒದಗಿಸುವಂತೆಯೂ ವಿಶ್ವಸಂಸ್ಥೆಯ ಸಮಿತಿಯು ಭಾರತವನ್ನು ಒತ್ತಾಯಿಸಿದೆ. ಬಂಧಿತ ಸ್ಥಳಗಳಲ್ಲಿ ಅವರ ಬದುಕುವ ಸ್ಥಿತಿಗತಿಗಳು ಉತ್ತಮವಾಗಿರಬೇಕು ಮತ್ತು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂಬುದಾಗಿಯೂ ಅದು ಹೇಳಿದೆ.

ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್ ಪ್ರಕಾರ, ಭಾರತದಲ್ಲಿ ಸುಮಾರು 79,000 ರೊಹಿಂಗ್ಯಾ ನಿರಾಶ್ರಿತರಿದ್ದಾರೆ. ಅವರ ಪೈಕಿ ಸುಮಾರು 22,000 ಮಂದಿ ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯಲ್ಲಿ ನೋಂದಾವಣೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News