ಖಾಲಿಸ್ತಾನಿ ಪರ ಹೋರಾಟಗಾರ ಅಮೃತ್‌ಪಾಲ್ ಸಿಂಗ್‌ಗೆ ಪೆರೋಲ್ ; ಜುಲೈ 5ರಂದು ಸಂಸದರಾಗಿ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

Update: 2024-07-03 16:43 GMT

PC :PTI 

ಚಂಡೀಗಢ/ಅಮೃತಸರ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತರಾಗಿ ಅಸ್ಸಾಂನ ದಿಬ್ರೂಗಢ ಜೈಲಿನಲ್ಲಿ ತಮ್ಮ ಒಂಬತ್ತು ಮಂದಿ ಸಹಚರರೊಂದಿಗಿರುವ 'ವಾರಿಸ್ ಪಂಜಾಬ್ ದೇ' ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್ ಅವರಿಗೆ ನಾಲ್ಕು ದಿನಗಳ ಪೆರೋಲ್ ಮಂಜೂರಾಗಿದ್ದು, ಅವರು ಶುಕ್ರವಾರದಂದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಅಮೃತಸರದಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಖದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೂಲಭೂತವಾದಿ ಸಿಖ್ ಪ್ರವಚನಕಾರ ಅಮೃತ್‌ಪಾಲ್ ಸಿಂಗ್, ಆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಫರೀದಾಕೋಟ್‌ನಿಂದ ಸ್ವತಂತ್ರ ಸಂಸದರಾಗಿರುವ ಸಿಂಗ್ ಖಾಲ್ಸಾ, ಅಮೃತ್‌ಪಾಲ್ ಸಿಂಗ್ ಅವರು ಜುಲೈ 5ರಂದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಅಮೃತ್‌ಪಾಲ್ ಸಿಂಗ್ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ವಿವಿಧ ಇಲಾಖೆಗಳಿಂದ ಪರವಾನಗಿ ಮತ್ತು ಅನುಮತಿಗಳನ್ನು ಪಡೆಯಲಾಗಿದೆ ಎಂದೂ ಅವರು ಹೇಳಿದ್ದಾರೆ.

ಮೃತ ಖಲಿಸ್ತಾನಿ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ನಕಲಿನಂತೆ ವರ್ತಿಸುತ್ತಿದ್ದ ಸಿಖ್ ಧಾರ್ಮಿಕ ಪ್ರವಚನಕಾರ ಅಮೃತ್‌ಪಾಲ್ ಸಿಂಗ್, ಫೆಬ್ರವರಿ 23ರಂದು ಪೊಲೀಸರಿಂದ ಬಂಧನಕ್ಕೀಡಾಗಿದ್ದ ತನ್ನ ಸಹಚರ ಲವ್‌ಪ್ರೀತ್ ಸಿಂಗ್ ತೂಫಾನ್ ಎಂಬಾತನನ್ನು ಬಿಡುಗಡೆಗೊಳಿಸುವಂತೆ ಅಮೃತಸರ ಹೊರವಲಯದಲ್ಲಿನ ಠಾಣೆಯೊಂದಕ್ಕೆ ಕತ್ತಿಯನ್ನು ಝಳಪಿಸುತ್ತಾ, ತಡೆಗೋಡೆಗಳನ್ನು ಧ್ವಂಸಗೊಳಿಸಿ ತನ್ನ ಸಹಚರರೊಂದಿಗೆ ನುಗ್ಗಿದ್ದರು. ಇದಾದ ನಂತರ ಪರಾರಿಯಾಗಿದ್ದ ಅಮೃತ್‌ಪಾಲ್ ಸಿಂಗ್‌ರನ್ನು ಎಪ್ರಿಲ್ 23ರಂದು ಮೋಗಾದ ರೋಡೆ ಗ್ರಾಮದಿಂದ ಒಂದು ತಿಂಗಳ ಶೋಧ ಕಾರ್ಯಾಚರಣೆಯ ನಂತರ ಬಂಧಿಸಿದ್ದ ಪೊಲೀಸರು, ಭಾರಿ ಭದ್ರತೆಯುಳ್ಳ ಅಸ್ಸಾಂನ ದಿಬ್ರೂಗಢ ಜೈಲಿಗೆ ರವಾನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News