ಭಾರತದಲ್ಲಿ ಬಡತನದ ಪ್ರಮಾಣ ಶೇ.8.5ಕ್ಕೆ ಕುಸಿತ : NCAER

Update: 2024-07-03 16:12 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಭಾರತದಲ್ಲಿ 2011-12ರಲ್ಲಿ 21.2 ಶೇಕಡದಷ್ಟಿದ್ದ ಬಡತನದ ಪ್ರಮಾಣವು 2022-24ರ ಅವಧಿಯಲ್ಲಿ ಶೇ.8.5ಕ್ಕೆ ಕುಸಿದಿದೆಯೆಂದು ಆರ್ಥಿಕ ಚಿಂತನ ವೇದಿಕೆ NCAER ಸಂಶೋಧನಾ ಪ್ರಬಂಧವೊಂದು ಅಂದಾಜಿಸಿದೆ.

‘ಬದಲಾಗುತ್ತಿರುವ ಸಮಾಜದಲ್ಲಿ ಸಾಮಾಜಿಕ ಸುರಕ್ಷತೆ ಜಾಲಗಳ ಮರುಚಿಂತನೆ ’ ಶೀರ್ಷಿಕೆಯ ಈ ಪ್ರಬಂಧವನ್ನು NCAERನ ಸೊನಾಲ್ಡೆ ದೇಸಾಯಿ ಬರೆದಿದ್ದಾರೆ. ಭಾರತ ಮಾನವ ಅಭಿವೃದ್ಧಿ ಸಮೀಕ್ಷೆ (ಐಎಚ್ಡಿಎಸ್)ಯ 1, 2 ಹಾಗೂ 3ನೇ ಆವೃತ್ತಿಯಿಂದ ಸಂಗ್ರಹಿಸಿದ ದತ್ತಾಂಶಗಳನ್ನು ಬಳಸಿಕೊಂಡು ಈ ಪ್ರಬಂಧವನ್ನು ಸಿದ್ಧಪಡಿಸಲಾಗಿದೆ.

‘‘ಐಎಚ್ಡಿಎಸ್ ಸಂಶೋಧನೆಯ ಪ್ರಕಾರ ಕೊರೋನಾ ಸಾಂಕ್ರಾಮಿಕವು ಒಡ್ಡಿದ ಸವಾಲುಗಳ ಹೊರತಾಗಿಯೂ 2004-2005ರ ಅವಧಿಯ ನಡುವೆ ಬಡತನವು ಗಣನೀಯವಾಗಿ ಇಳಿಕೆಯಾಗಿದೆ. 2011-12 (ತಲೆಏಣಿಕೆ ಅನುಪಾತ 38.6 ರಿಂದ 21.2ವರೆಗೆ ) ಹಾಗೂ 2022-24ರ (21.2ರಿಂದ 8.5ರವರೆಗೆ) ನಡುವೆ ಕುಸಿತವನ್ನು ಮುಂದುವರಿಸಿದೆ’’ ಎಂದು ಪ್ರಬಂಧ ತಿಳಿಸಿದೆ.

ಆರ್ಥಿಕ ಬೆಳವಣಿಗೆ ಹಾಗೂ ಬಡತನದ ಕುಸಿತವು ಸಾಮಾಜಿಕ ಸುರಕ್ಷತಾ ಕಾರ್ಯಕ್ರಮವನ್ನು ಚುರುಕುಗೊಳಿಸುವಂತಹ ಕ್ರಿಯಾಶೀಲ ವಾತಾವರಣವನ್ನು ಸೃಷ್ಟಿಸಿದೆ ಎಂದು ವರದಿ ಹೇಳಿದೆ.ಸಮಾಜದ ವಿಶಾಲ ಭಾಗದಲ್ಲಿ ತಾಂಡವವಾಡುತ್ತಿರುವ ದೀರ್ಘಾವಧಿಯ ಬಡತನವನ್ನು ನಿವಾರಿಸಲು ಸಾಂಪ್ರದಾಯಿಕ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ ಎಂದು ಪ್ರಬಂಧವು ಮೆಚ್ಚುಗೆ ವ್ಯಕ್ತಪಡಿಸಿದೆ.

ಸಾಮಾಜಿಕ ಪರಿವರ್ತನೆಯ ಗತಿಯನ್ನು ಉಳಿಸಿಕೊಳ್ಳಲು ಸಾಮಾಜಿಕ ಸುರಕ್ಷತಾ ವ್ಯವಸ್ಥೆಗಳ ರಕ್ಷಣೆಯನ್ನು ಖಾತರಿಪಡಿಸುವ ಬಗ್ಗೆ ಪ್ರಬಂಧವು ಗಮನಸೆಳೆದಿದೆ.

ಈ ವರ್ಷದ ಆರಂಭದಲ್ಲಿ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು, ದೇಶದಲ್ಲಿ ಬಡತನವು ಶೇ.5ಕ್ಕೆ ಕುಸಿದಿದೆಯೆಂದು ನೂತನ ಗ್ರಾಹಕ ವೆಚ್ಚ ಸಮೀಕ್ಷೆಯು ಸೂಚಿಸಿರುವುದಾಗಿ ಹೇಳಿದೆ. ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಜನರು ಏಳಿಗೆಯಾಗುತ್ತಿದ್ದಾರೆಂದು ಸಮೀಕ್ಷೆಯು ತೋರಿಸಿದೆಯೆಂದು ಅವರು ತಿಳಿಸಿದ್ದರು.

ತೆಂಡುಲ್ಕರ್ ಸಮಿತಿ ವರದಿಯು 2004-2005ರ ಅವಧಿಯಲ್ಲಿ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಬಡತನದ ರೇಖೆಯನ್ನು ಕ್ರಮವಾಗಿ ದೈನಂದಿನ ಆದಾಯ 447ರೂ. ಹಾಗೂ 579 ರೂ. ಎಂಬುದಾಗಿ ನಿಗದಿಪಡಿಸಿತ್ತು. 2011-12ರ ಅವಧಿಯಲ್ಲಿ ಯೋಜನಾ ಆಯೋಗವು ಬಡತನದ ಮಿತಿಯನ್ನು ಪರಿಷ್ಕರಿಸಿದ್ದು, ಬಡತನದ ರೇಖೆಯ ಮಾನದಂಡವಾಗಿ ದೈನಂದಿನ ಆದಾಯವನ್ನು ಕ್ರಮವಾಗಿ 860 ರೂ. ಹಾಗೂ 1 ಸಾವಿರ ರೂ. ಎಂಬುದಾಗಿ ನಿಗದಿಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News