ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: 18 ಮಂದಿ ಮೃತ್ಯು

Update: 2025-02-16 07:30 IST
ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: 18 ಮಂದಿ ಮೃತ್ಯು

PC: x.com/PTI_News

  • whatsapp icon

ಹೊಸದಿಲ್ಲಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ 14 ಮಹಿಳೆಯರು ಸೇರಿದಂತೆ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ವಿಶೇಷ ರೈಲೊಂದರ ಘೋಷಣೆ ಬೆನ್ನಲ್ಲೇ 15-20 ನಿಮಿಷಗಳಲ್ಲಿ ಭಾರಿ ಜನದಟ್ಟಣೆಯಿಂದ ನೂಕು ನುಗ್ಗಲು ಸಂಭವಿಸಿದ್ದು ದುರಂತಕ್ಕೆ ಕಾರಣವಾಯಿತು ಎನ್ನಲಾಗಿದೆ.

ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳುವ ವಿಶೇಷ ರೈಲು ಏರಲು ದೊಡ್ಡ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದು ನೂಕು ನುಗ್ಗಲಿಗೆ ಕಾರಣವಾಯಿತು. ಭಾರಿ ಜನದಟ್ಟಣೆಯಲ್ಲಿ ಕೆಲವರು ಪ್ರಜ್ಞೆ ಕಳೆದುಕೊಂಡು ಬಿದ್ದು, ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ವದಂತಿಗಳು ಗೊಂದಲಕ್ಕೆ ಕಾರಣವಾಯಿತು.

ಘಟನೆ ಬಗ್ಗೆ ಎಕ್ಸ್ ಹ್ಯಾಂಡಲ್ ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, "ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ತೀವ್ರ ವೇದನೆಯಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ಜತೆ ನಾವಿದ್ದೇವೆ. ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಕಾಲ್ತುಳಿತದಿಂದ ಸಂಕಷ್ಟಕ್ಕೀಡಾಗಿರುವವರಿಗೆ ಅಧಿಕಾರಿಗಳು ಅಗತ್ಯ ನೆರವು ನೀಡುತ್ತಿದ್ದಾರೆ" ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ 15 ಮಂದಿ ಮೃತಪಟ್ಟಿರುವುದನ್ನು ಎಲ್ಎನ್ಜೆಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ದೃಢಪಡಿಸಿದ್ದಾರೆ. ಇತರ 10 ಮಂದಿ ಗಾಯಗೊಂಡಿದ್ದಾಗಿ ಅವರು ವಿವರಿಸಿದ್ದಾರೆ. ಪ್ಲಾಟ್ಫಾರಂ ಸಂಖ್ಯೆ 13 ಮತ್ತು 14ರಲ್ಲಿ ರೈಲು ಏರಲು ಜನದಟ್ಟಣೆ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿತು ಎನ್ನಲಾಗಿದೆ.

ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ ►https://whatsapp.com/channel/0029VaA8ju86LwHn9OQpEq28

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News