ಜಮ್ಮುವಿನ ಎಲ್ಒಸಿ ಬಳಿ ಡ್ರೋನ್ ಗಳು ಬೀಳಿಸಿದ್ದ ಶಸ್ತ್ರಾಸ್ತ್ರಗಳು, ನಗದು ವಶ

Update: 2023-12-24 14:27 GMT

ಸಾಂದರ್ಭಿಕ ಚಿತ್ರ | Photo Credit: PTI

ಜಮ್ಮು: ಜಮ್ಮು-ಕಾಶ್ಮೀರದ ಅಖ್ನೂರ್ ವಿಭಾಗದಲ್ಲಿಯ ನಿಯಂತ್ರಣ ರೇಖೆ (ಎಲ್ಒಸಿ)ಯ ಬಳಿಯ ಗ್ರಾಮವೊಂದರಲ್ಲಿ ಸೇನೆ ಮತ್ತು ಪೋಲಿಸರು ರವಿವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎರಡು ಡ್ರೋನ್ಗಳು ಬೀಳಿಸಿದ್ದ, ಶಸ್ತ್ರಾಸ್ತ್ರಗಳು ಮತ್ತು ನಗದು ಹಣವಿದ್ದ ಪ್ಯಾಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ವಿಧ್ವಂಸಕ ಚಟುವಟಿಕೆಗಳಿಗಾಗಿ ಪಾಕಿಸ್ತಾನಿ ಡ್ರೋನ್ಗಳು ಬೀಳಿಸಿದ್ದು ಎಂದು ನಂಬಲಾಗಿರುವ ಈ ಪ್ಯಾಕೆಟ್ಗಳು ಬೆಳಿಗ್ಗೆ 7:50ರ ಸುಮಾರಿಗೆ ಚನ್ನಿ ದೇವಾನೊ ಗ್ರಾಮದ ಬಯಲು ಪ್ರದೇಶದಲ್ಲಿ ಪತ್ತೆಯಾಗಿದ್ದವು.

ತಕ್ಷಣ ಜಂಟಿ ಕಾರ್ಯಾಚರಣೆಗಿಳಿದ ಸೇನೆ ಮತ್ತು ಪೋಲಿಸರು ಬಾಂಬ್ ನಿಷ್ಕ್ರಿಯ ದಳದ ನೆರವಿನೊಂದಿಗೆ ಪ್ಯಾಕೆಟ್ಗಳನ್ನು ತೆರೆದಾಗ ಅದರಲ್ಲಿ ಶಸ್ತ್ರಾಸ್ತ್ರಗಳು ಮತ್ತು ನಗದು ಹಣವಿರುವುದು ಕಂಡು ಬಂದಿತ್ತು.

ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳಲ್ಲಿ ಒಂದು 9 ಎಂಎಂ ಇಟಲಿ ನಿರ್ಮಿತ ಪಿಸ್ತೂಲು, ಮೂರು ಮ್ಯಾಗಝಿನ್ಗಳು, 30 ಗುಂಡುಗಳು,ಮೂರು ಸುಧಾರಿತ ಸ್ಫೋಟಕ ಸಾಧನ (ಐಇಡಿ)ಗಳು,ಮೂರು ಐಇಡಿ ಬ್ಯಾಟರಿಗಳು, ಒಂದು ಹ್ಯಾಂಡ್ ಗ್ರೆನೇಡ್ ಸೇರಿದ್ದು, 35,000 ರೂ.ನಗದು ಹಣವನ್ನೂ ವಶಪಡಿಸಿಕೊಳ್ಳಲಾಗಿದೆ.

ಇದೇ ಅಖ್ನೂರ್ ವಿಭಾಗದಲ್ಲಿ ಶನಿವಾರ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ್ದ ಸೇನಾ ಪಡೆಗಳು ಭಯೋತ್ಪಾದಕನೋರ್ವನನ್ನು ಹೊಡೆದುರುಳಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News