Live Updates| ವಯನಾಡ್‌ನಲ್ಲಿ ಭೀಕರ ಭೂಕುಸಿತ: ಮೃತರ ಸಂಖ್ಯೆ 84ಕ್ಕೆ ಏರಿಕೆ
ವಯನಾಡ್: ಭಾರಿ ಮಳೆಯಿಂದಾಗಿ ಕೇರಳದ ವಯನಾಡ್ ಜಿಲ್ಲೆಯಲ್ಲಿ ಕೇವಲ 4 ಗಂಟೆಗಳ ಅಂತರದಲ್ಲಿ ಸಂಭವಿಸಿದ ಮೂರು ಭೂ ಕುಸಿತಗಳಿಂದ ಇಲ್ಲಿಯವರೆಗೆ ಕನಿಷ್ಠ 84 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಮಣ್ಣಿನಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.
ಮೆಪ್ಪಾಡಿ ಬಳಿಯ ಗಿರಿ ಶ್ರೇಣಿಗಳಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ಹಲವಾರು ರಕ್ಷಣಾ ತಂಡಗಳು ತೊಡಗಿಕೊಂಡಿವೆ.
ತೊಂದರೆಗೆ ಸಿಲುಕಿರುವ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದ್ದು, ಮತ್ತೊಂದು ಹೆಚ್ಚುವರಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ವಯನಾಡ್ ಗೆ ತಲುಪುವುದರಲ್ಲಿದೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹೇಳಿದೆ.
ವಯನಾಡ್ ನಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಲಾಗಿದೆ.
ವಯನಾಡ್ ನ ಮುಂಡಕ್ಕೈನಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಪರಿಹಾರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ತೀವ್ರ ತೊಡಕುಂಟಾಗಿದ್ದು, ಈ ನಡುವೆಯೇ ಮತ್ತೊಂದು ಭೂ ಕುಸಿತ ಸಂಭವಿಸಿರುವುದರಿಂದ ಮುಂಡಕ್ಕೈನಲ್ಲಿ ಆತಂಕ ಮನೆ ಮಾಡಿದೆ.
ಕೇರಳದ ವಯನಾಡ್ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಈವರೆಗೆ 54 ಮಂದಿ ಮೃತಪಟ್ಟಿದ್ದು, ಇನ್ನೂ ಹಲವು ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ವಯನಾಡ್, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಇಂದು (ಮಂಗಳವಾರ) ‘ರೆಡ್ ಅಲರ್ಟ್’ ಘೋಷಿಸಿದೆ.
ಹೊಸದಿಲ್ಲಿ: ವಯನಾಡ್ ನಲ್ಲಿ ಸಂಭವಿಸಿರುವ ಭೀಕರ ಭೂಕುಸಿತದ ಕುರಿತು ವಿಪಕ್ಷ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್, “ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಂದು ವಯನಾಡ್ ನಲ್ಲಿ ಸಂಭವಿಸಿರುವ ಭಯಾನಕ ಭೂ ಕುಸಿತದ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸಿದರು. ವಯನಾಡ್ ನಿಂದ ಬರುತ್ತಿರುವ ಸುದ್ದಿಗಳು ಹೃದಯವಿದ್ರಾವಕವಾಗಿದ್ದು, ಭೂಕುಸಿತಗಳು ಮುಂದುವರಿದಿವೆ ಎಂಬುದರತ್ತ ಬೊಟ್ಟು ಮಾಡುತ್ತಿವೆ” ಎಂದು ಬರೆದುಕೊಂಡಿದ್ದಾರೆ.
“ಈ ಅತ್ಯಗತ್ಯದ ಸಂದರ್ಭದಲ್ಲಿ ವಯನಾಡ್ ಜನತೆಗೆ ನೆರವನ್ನು ಒದಗಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾವು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡನ್ನೂ ಆಗ್ರಹಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರಕಾರವು ಸಾಧ್ಯವಿರುವ ಎಲ್ಲ ಬಗೆಯ ನಿಧಿ ಒದಗಿಸುವ ಮೂಲಕ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವ ಮೂಲಕ ಕೇರಳ ಸರಕಾರಕ್ಕೆ ನೆರವು ಹಾಗೂ ಸಹಾಯ ಒದಗಿಸಲಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಭರವಸೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸುರೇಶ್ ಗೋಪಿ, “ನಾನು ಇಂದು ಬೆಳಗ್ಗೆ ಪ್ರಧಾನಿಯನ್ನು ಸಂಪರ್ಕಿಸಿದ್ದು, ರಕ್ಷಣಾ ಕಾರ್ಯಾಚರಣೆ ಸುಗಮವಾಗಿ ನಡೆಯುವುದನ್ನು ಖಾತರಿ ಪಡಿಸಲು ಅಗತ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿಯವರು ಕೇರಳ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದು, ಕೇಂದ್ರ ಸರಕಾರವು ಸಾಧ್ಯವಿರುವ ಎಲ್ಲ ನೆರವನ್ನೂ ನೀಡಲಿದೆ ಎಂದು ಭರವಸೆ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಮನ್ವಯತೆ ಸಾಧಿಸಲು ಜಿಲ್ಲಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ನಿರಂತರವಾಗಿ ಮುಖ್ಯಮಂತ್ರಿ ಹಾಗೂ ನನ್ನ ಸಂಪರ್ಕದಲ್ಲಿದ್ದಾರೆ” ಎಂದು ಹೇಳಿದ್ದಾರೆ.
ಕೇರಳದ ವಯನಾಡಿನಲ್ಲಿ ಉಂಟಾಗಿರುವ ಭೂಕುಸಿತಗಳು ಹಾಗೂ ಹಲವಾರು ಮಂದಿ ಮಣ್ಣಿನಡಿ ಸಿಲುಕಿರುವ ಆತಂಕದ ನಡುವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾ ಮುಖ್ಯಸ್ಥರ ಜೊತೆ ಮಾತನಾಡಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಭಾರತೀಯ ಸೇನೆಯನ್ನು ನಿಯೋಜಿಸಲಾಗಿದೆ.
ತನ್ನ ನೂರಾರು ಕಾರ್ಯಕರ್ತರನ್ನು ವಯನಾಡಿನಲ್ಲಿ ರಕ್ಷಣಾ ಕಾರ್ಯಗಳಿಗಾಗಿ ಬಳಸಲಾಗುವುದು ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಹೇಳಿದೆ.
ಸಂತ್ರಸ್ತರಿಗೆ ಅಗತ್ಯ ಔಷಧಿಗಳು, ಬಟ್ಟೆಬರೆ ಮತ್ತು ಆಹಾರವನ್ನು ಒದಗಿಸಲು ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್ ಹೇಳಿದ್ದಾರೆ.
ಕೇರಳದ ವಯನಾಡಿನಲ್ಲಿ ಉಂಟಾದ ಭಾರೀ ಭೂಕುಸಿತಗಳಿಗೆ ಸಂಬಂಧಿಸಿದಂತೆ ಇಂದು ಲೋಕಸಭೆಯಲ್ಲಿ ಸಂಸದ ಕೆ ಸಿ ವೇಣುಗೋಪಾಲ್ ಅವರು ನಿಲುವಳಿ ಸೂಚನೆ ಮಂಡಿಸಿದರು ಹಾಗೂ ತಕ್ಷಣ ನಾಪತ್ತೆಯಾದವರಿಗೆ ಶೋಧ ಮತ್ತು ರಕ್ಷಣಾ ಕ್ರಮಗಳಿಗಾಗಿ ಆಗ್ರಹಿಸಿದರು.
ಭಾರೀ ಮಳೆಯಿಂದಾಗಿ ವಯನಾಡಿನಲ್ಲಿ ಉಂಟಾದ ಭೂಕುಸಿತಗಳ ಕುರಿತು ಚರ್ಚಿಸಲು ನಿಯಮ 267 ಅನ್ವಯ ಸಸ್ಪೆನ್ಶನ್ ಆಫ್ ಬಿಸಿನೆಸ್ ನೋಟಿಸ್ ಅನ್ನು ಐಯುಎಂಎಲ್ ಸಂಸದ ಪಿ ವಿ ಅಬ್ದುಲ್ ವಹಾಬ್ ನೀಡಿದರು.