ಸಾಮಾಜಿಕ ನ್ಯಾಯ ಸಚಿವಾಲಯದ ಆ್ಯಪ್ ನಲ್ಲಿ 6,253 ಮ್ಯಾನ್ಯುವಲ್ ಸ್ಕಾವೆಂಜಿಂಗ್ ಪ್ರಕರಣ

Update: 2023-07-30 17:59 GMT

ಸಾಂದರ್ಭಿಕ ಚಿತ್ರ | PTI

ಹೊಸದಿಲ್ಲಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಆ್ಯಪ್ ‘ಸ್ವಚ್ಛತಾ ಅಭಿಯಾನ ’ನಲ್ಲಿಯ ಡೇಟಾ ದೇಶದಲ್ಲಿ ದೈಹಿಕವಾಗಿ ಮಲಗುಂಡಿ ಸ್ವಚ್ಛತೆ ಅಥವಾ ಮ್ಯಾನ್ಯುವಲ್ ಸ್ಕಾವೆಂಜಿಂಗ್ ನ 6,253 ಪ್ರಕರಣಗಳನ್ನು ಗುರುತಿಸಿದೆ. ಆದರೆ ಈ ಸಂಖ್ಯೆ ಅಧಿಕೃತವೇ ಎನ್ನುವುದು ಸಚಿವಾಲಯಕ್ಕೆ ಖಚಿತವಿಲ್ಲ.

ಈಗಲೂ ಅಸ್ತಿತ್ವದಲ್ಲಿರುವ ಅಸ್ವಚ್ಛ ಶೌಚಾಲಯಗಳು ಮತ್ತು ಅವುಗಳ ಜೊತೆ ಗುರುತಿಸಿಕೊಂಡಿರುವ ಮ್ಯಾನ್ಯುವಲ್ ಸ್ಕಾವೆಂಜರ್ಗಳ ಕುರಿತು ಮಾಹಿತಿ ಸಂಗ್ರಹಿಸಲು 2020,ಡಿ.24ರಂದು ಮೊಬೈಲ್ ಆ್ಯಪ್ಗೆ ಚಾಲನೆ ನೀಡಲಾಗಿತ್ತು. ಕಡಿಮೆ ವೆಚ್ಚದಲ್ಲಿ ನಿಖರವಾದ ಡೇಟಾ ಒದಗಿಸುವುದು ಆ್ಯಪ್ನ ಉದ್ದೇಶವಾಗಿತ್ತು,ದೈಹಿಕವಾಗಿ ಸಮೀಕ್ಷೆ ನಡೆಸುವುದು ದುಬಾರಿಯಾಗುತ್ತದೆ ಮತ್ತು ಸಮಯವನ್ನೂ ತೆಗೆದುಕೊಳ್ಳುತ್ತದೆ. ಯಾರು ಬೇಕಾದರೂ ಅನೈರ್ಮಲ್ಯದಿಂದ ಕೂಡಿದ ಶೌಚಾಲಯಗಳು ಮತ್ತು ಮ್ಯಾನ್ಯುವಲ್ ಸ್ಕಾವೆಂಜರ್ಗಳ ಕುರಿತು ಮಾಹಿತಿಗಳನ್ನು ಮೊಬೈಲ್ ಆ್ಯಪ್ನಲ್ಲಿ ಅಪ್ಲೋಡ್ ಮಾಡಬಹುದು. ಬಳಿಕ ಸಂಬಂಧಿಸಿದ ಜಿಲ್ಲಾಡಳಿತಗಳು ಈ ಮಾಹಿತಿಗಳನ್ನು ಪರಿಶೀಲಿಸುತ್ತವೆ ಎಂದು ಸಚಿವಾಲಯವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಟಿಪ್ಪಣಿಯಲ್ಲಿ ತಿಳಿಸಿದೆ.

ಆ್ಯಪ್ನಲ್ಲಿ ಸಂಗ್ರಹಿಸಲಾದ ಮಾಹಿತಿಗಳಂತೆ ಮ್ಯಾನ್ಯುವಲ್ ಸ್ಕಾವೆಂಜಿಂಗ್ನ ಒಟ್ಟು 6,253 ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಡೇಟಾದ ಸತ್ಯಾಸತ್ಯತೆಗಳನ್ನು ಕಂಡುಕೊಳ್ಳಲು ಸಚಿವಾಲಯದ ಕಾರ್ಯಕ್ರಮ ಉಸ್ತುವಾರಿ ಘಟಕ (ಪಿಎಂಯು)ವು ಭೌತಿಕ ಪರಿಶೀಲನೆಯನ್ನು ನಡೆಸಿತ್ತು. ಆದರೆ ಇದುವರೆಗೂ ಒಂದೇ ಒಂದು ಅಸ್ವಚ್ಛ ಶೌಚಾಲಯ ದೃಢಪಟ್ಟಿಲ್ಲ. ಜನರು ಇತರ ವಿವರಗಳನ್ನು ಅಪ್ಲೋಡ್ ಮಾಡಿದ್ದಾರೆ,ಆದರೆ ಅನೈರ್ಮಲ್ಯದ ಶೌಚಾಲಯಗಳು ಅಥವಾ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಆಚರಣೆಯ ಕುರಿತು ಅಲ್ಲ ಎನ್ನುವುದನ್ನು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗಿರುವ ಚಿತ್ರಗಳು ತೋರಿಸಿವೆ ಎಂದು ಜು.27ರ ಟಿಪ್ಪಣಿಯು ಹೇಳಿದೆ.

ಜಿಲ್ಲೆಗಳಲ್ಲಿಯ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಸ್ಥಿತಿಗತಿಯನ್ನು ಪುನರ್ಪರಿಶೀಲಿಸುವಂತೆ ತಾನು ಈಗಾಗಲೇ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದಾಗಿ ಕೇಂದ್ರವು ಹೇಳಿದೆ. ಸಾಮಾಜಿಕ ನ್ಯಾಯ ಸಚಿವಾಲಯವು ಜು.31ರಂದು ಸಭೆಯೊಂದನ್ನು ಕರೆದಿದೆ.

ಮ್ಯಾನ್ಯುವಲ್ ಸ್ಕಾವೆಂಜರ್ಗಳಾಗಿ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ,2013 ಜಾರಿಗೊಂಡು ಒಂದು ದಶಕವೇ ಕಳೆದಿದ್ದರೂ ಸಾಮಾಜಿಕ ನ್ಯಾಯ ಸಚಿವಾಲಯವು ಈಗಲೂ ಮ್ಯಾನ್ಯುವಲ್ ಸ್ಕಾವೆಂಜರ್ಗಳನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಕಾಯ್ದೆಯ ಕಲಂ 2(ಜಿ) ಪ್ರಕಾರ ‘ಮ್ಯಾನ್ಯುವಲ್ ಸ್ಕಾವೆಂಜಿಂಗ್’ ಅನ್ನು ನೈರ್ಮಲ್ಯರಹಿತ ಶೌಚಾಲಯಗಳಿಂದ ಮಾನವ ಮಲ ವಿಸರ್ಜನೆಯನ್ನು ಕೈಗಳಿಂದ ಎತ್ತುವ,ಸಾಗಿಸುವ ಮತ್ತು ವಿಲೇವಾರಿ ಮಾಡುವ ಕೆಲಸ ಎಂದು ವ್ಯಾಖ್ಯಾನಿಸಲಾಗಿದೆ. ಕಾಯ್ದೆಯು ಅಸ್ತಿತ್ವಕ್ಕೆ ಬಂದು ಏಳು ತಿಂಗಳ ಬಳಿಕ 2014,ಮಾರ್ಚ್ನಲ್ಲಿ ಸರ್ವೋಚ್ಚ ನ್ಯಾಯಾಲಯವು ದೈಹಿಕವಾಗಿ ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿರುವವರಿಗೆ ಪುನರ್ವಸತಿ ಮತ್ತು ಪರ್ಯಾಯ ಉದ್ಯೋಗವನ್ನು ಒದಗಿಸುವಂತೆ ರಾಜ್ಯಗಳಿಗೆ ಸೂಚಿಸಿತ್ತು.

ದೇಶದಲ್ಲಿ ಈವರೆಗೆ 58,098 ಮ್ಯಾನ್ಯುವಲ್ ಸ್ಕಾವೆಂಜಿಂಗ್ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಡೇಟಾ ತೋರಿಸಿದೆ.

ಆದರೆ ಮ್ಯಾನ್ಯುವಲ್ ಸ್ಕಾವೆಂಜರ್ಗಳ ಸಂಖ್ಯೆಯು ಹಾಲಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮ್ಯಾನ್ಯುವಲ್ ಸ್ಕಾವೆಂಜರ್ಗಳ ಸಂಖ್ಯೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸರಕಾರವು ಪ್ರತಿಪಾದಿಸಿಕೊಂಡು ಬಂದಿದೆ.

ಮ್ಯಾನ್ಯುವಲ್ ಸ್ಕಾವೆಂಜರ್ಗಳ ಗುರುತಿಸುವಿಕೆಯು,ಅಂದರೆ ವರದಿಯಾಗಿರುವ ಸಂಖ್ಯೆಯು ಪುನರ್ವಸತಿ ಪ್ರಯೋಜನಗಳ ವಿಸ್ತರಣೆಗಾಗಿದೆ. ಏರಿಕೆಯಾಗಿರುವ ಗುರುತಿಸಲಾದ ಸಂಖ್ಯೆಯು ಸಕ್ರಿಯ ಮ್ಯಾನ್ಯುವಲ್ ಸ್ಕಾವೆಂಜಿಗ್ ಚಟುವಟಿಕೆಗಳಲ್ಲಿ ಹೆಚ್ಚಳವಾಗಿದೆ ಎನ್ನುವುದನ್ನು ಸೂಚಿಸುತ್ತದೆ ಎಂದು ಅರ್ಥೈಸಿಕೊಳ್ಳಬಾರದು. ಮ್ಯಾನ್ಯುವಲ್ ಸ್ಕಾವೆಂಜರ್ಗಳ ಗುರುತಿಸುವಿಕೆಯು ಯಾವಾಗಲೂ ಉದ್ಯೋಗ ಆಧಾರಿತವಾಗಿರುತ್ತದೆ,ಜಾತಿ ಆಧಾರಿತವಲ್ಲ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News