ಉತ್ತರಾಖಂಡ: ಕ್ರೈಸ್ತ ಪ್ರಾರ್ಥನಾ ಕೂಟ ನಡೆಯುತ್ತಿದ್ದ ಮನೆ ಮೇಲೆ ಸಂಘ ಪರಿವಾರ ಕಾರ್ಯಕರ್ತರಿಂದ ದಾಳಿ, ದಾಂಧಲೆ
ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ರವಿವಾರದಂದು ಸಾಪ್ತಾಹಿಕ ಕ್ರೈಸ್ತ ಪ್ರಾರ್ಥನಾ ಸಭೆಯೊಂದು ನಡೆಯುತ್ತಿದ್ದ ಮನೆಯೊಂದಕ್ಕೆ ದಾಳಿ ನಡೆಸಿದ ಸಂಘ ಪರಿವಾರದ ಕಾರ್ಯಕರ್ತರು ಮನೆಯಲ್ಲಿದ್ದ ಕನಿಷ್ಠ ಏಳು ಮಂದಿಯ ಮೇಲೆ ಹಲ್ಲೆ ನಡೆಸಿ ಪ್ರಾರ್ಥನಾ ಕೊಠಡಿ ಹಾಗೂ ಮನೆಯ ಬೆಡ್‌ರೂಂನಲ್ಲಿ ದಾಂಧಲೆ ನಡೆಸಿದ್ದಾರೆ. ದುಷ್ಕರ್ಮಿಗಳು ಕ್ರೈಸ್ತ ಧರ್ಮದ ಕುರಿತು ನಿಂದನಾತ್ಮಕ ಮಾತುಗಳನ್ನಾಡಿದ್ದೇ ಅಲ್ಲದೆ ಅಲ್ಲಿದ್ದವರ ವಿರುದ್ಧ ಬಲವಂತದ ಮತಾಂತರದ ಆರೋಪ ಹೊರಿಸಿದ್ದಾರೆ ಎಂದು newslaundry.com ವರದಿ ಮಾಡಿದೆ.
ಈ ಪ್ರಾರ್ಥನಾ ಸಭೆ ದೀಕ್ಷಾ ಪೌಲ್ ಎಂಬವರ ಮನೆಯಲ್ಲಿ ನಡೆಯುತ್ತಿತ್ತು. ದೀಕ್ಷಾ ಅವರ ಪತಿ ರಾಜೀಶ್ ಭೂಮಿ ಪ್ಯಾಸ್ಟರ್ ಆಗಿದ್ದು ಹರಿದ್ವಾರ್‌ನಲ್ಲಿ ಹೋಟೆಲ್ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ನೆಹ್ರೂ ಕಾಲನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು 11 ಮಂದಿ ಆರೋಪಿಗಳನ್ನು ಹೆಸರಿಸಲಾಗಿದೆ.
ಆರೋಪಿಗಳನ್ನು ದೇವೇಂದ್ರ ದೋಭಲ್, ಬಿಜೇಂದ್ರ ಥಾಪ, ಸಧೀರ್ ಥಾಪ, ಸಂಜೀವ್ ಪೌಲ್, ಸುಧೀರ್ ಪೌಲ್, ಧೀರೇಂದ್ರ ಧೋಬಲ್, ಅರ್ಮಾನ್ ಧೋಬಲ್, ಆರ್ಯಮಾನ್ ಧೋಬಲ್, ಅನಿಲ್ ಹಿಂದು, ಭೂಪೇಶ್ ಜೋಷಿ ಮತ್ತು ಬಿಜೇಂದ್ರ ಎಂದು ಗುರುತಿಸಲಾಗಿದೆ.
ತಮ್ಮ ಮನೆ ಮೇಲೆ ದಾಳಿ ನಡೆಸಿದ ಗುಂಪಿನ ನೇತೃತ್ವವನ್ನು ದೇವೇಂದ್ರ ದೋಭಲ್ ವಹಿಸಿದ್ದ ಎಂದು ದೀಕ್ಷಾ ಆರೋಪಿಸಿದ್ದಾರೆ. ಈ ವ್ಯಕ್ತಿಯ ಫೇಸ್ಬುಕ್ ಪ್ರೊಫೈಲ್ ಪ್ರಕಾರ ಈತ ಮಾಜಿ ಸೈನಿಕ ಹಾಗೂ ಆರೆಸ್ಸೆಸ್ ಸದಸ್ಯನಾಗಿದ್ದಾನೆ.