ದಿಲ್ಲಿಯಲ್ಲಿ ಭಾರೀ ಮಳೆ: ಮೃತರ ಸಂಖ್ಯೆ 7ಕ್ಕೆ ಏರಿಕೆ
ಹೊಸದಿಲ್ಲಿ: ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ದಾಖಲೆ ಪ್ರಮಾಣದ ಮಳೆಯಾಗುತ್ತಿರುವುದರಿಂದ ಭಾರತೀಯ ಹವಾಮಾನ ಇಲಾಖೆಯು ದಿಲ್ಲಿಗೆ ರೆಡ್ ಅಲರ್ಟ್ ಘೋಷಿಸಿದೆ. ದಿಲ್ಲಿಯ ನಾಗರಿಕರು ಮನೆಯಲ್ಲೇ ಉಳಿಯಬೇಕು, ತಮ್ಮ ಮನೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಹಾಗೂ ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆಯು ಸಲಹೆ ನೀಡಿದೆ.
ದಿಲ್ಲಿಯ ಎಲ್ಲ ಶಾಲೆಗಳಿಗೆ ಆಗಸ್ಟ್ 1ರಂದು ರಜೆ ಘೋಷಿಸಲಾಗಿದೆ ಎಂದು ಬುಧವಾರ ತಡರಾತ್ರಿ ದಿಲ್ಲಿ ಶಿಕ್ಷಣ ಸಚಿವೆ ಅತಿಶಿ ಪ್ರಕಟಿಸಿದರು.
ಭಾರಿ ಮಳೆಯಿಂದಾಗಿ ದಿಲ್ಲಿಯಲ್ಲಿ ಮಾತ್ರವಲ್ಲದೆ ದಿಲ್ಲಿ-ನೊಯ್ಡಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲೂ ಭಾರಿ ಸಂಚಾರ ದಟ್ಟಣೆಯುಂಟಾಗಿದೆ ಎಂದು ವಾಹನ ಸವಾರರು ಮಾಹಿತಿ ನೀಡಿದ್ದಾರೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮೆಹ್ರೌಲಿ-ಛತ್ತರ್ ಪುರ್ ರಸ್ತೆಯಲ್ಲಿ ವಾಹನ ಸವಾರರು ಒಂದೂವರೆ ಗಂಟೆಗಿಂತಲೂ ಹೆಚ್ಚು ಕಾಲ ರಸ್ತೆ ಮಧ್ಯೆಯೇ ಸಿಲುಕಿಕೊಂಡಿದ್ದರು ಎಂದು ವರದಿಯಾಗಿದೆ.
ಇದೇ ರೀತಿ ಉತ್ತರ ಪ್ರದೇಶದ ನೊಯ್ಡಾದಿಂದ ದಿಲ್ಲಿಯ ಮೂಲ್ ಚಂದ್ರ ಗೆ ಸಂಪರ್ಕ ಕಲ್ಪಿಸುವ ಫ್ಲೈಓವರ್ ನಲ್ಲಿ ವಾಹನಗಳ ಸರತಿ ಸಾಲು ನಿಂತಿರುವುದೂ ಕಂಡು ಬಂದಿದೆ.
ಸಂಚಾರ ದಟ್ಟಣೆಯು ನಿರ್ದಿಷ್ಟವಾಗಿ ಲ್ಯುಟಿನ್ಸ್ ದಿಲ್ಲಿ ಹಾಗೂ ಗುರುಗ್ರಾಮ, ನೊಯ್ಡಾ, ಘಾಝಿಯಾಬಾದ್ ಮತ್ತು ಫರೀದಾಬಾದ್ ಗೆ ತೆರಳುವ ಮಾರ್ಗಗಳಲ್ಲಿ ಗಂಭೀರ ಸ್ವರೂಪದಲ್ಲಿತ್ತು ಎನ್ನಲಾಗಿದೆ. ಹಳೆಯ ರಾಜಿಂದರ್ ನಗರ್ ನ ತರಬೇತಿ ಕೇಂದ್ರವೊಂದರ ನೆಲ ಅಂತಸ್ತಿಗೆ ನುಗ್ಗಿದ ಪ್ರವಾಹದ ನೀರಿಗೆ ಸಿಲುಕಿ ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟಿರುವ ಘಟನೆಯ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳು ಮೊಣಕಾಲವರೆಗೆ ನೀರಿನಲ್ಲಿ ಮುಳುಗಿರುವುದು ಕಂಡು ಬಂದಿತು. ಕನ್ಹಾಟ್ ಪ್ಲೇಸ್ ನಲ್ಲಿನ ಹಲವಾರು ಶೋರೂಮ್ ಗಳು ಹಾಗೂ ರೆಸ್ಟೋರೆಂಟ್ ಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸಬೇಕಾಯಿತು.
ಈ ನಡುವೆ, ತನುಜಾ ಹಾಗೂ ಆಕೆಯ ಮೂರು ವರ್ಷದ ಪುತ್ರ ಪ್ರಿಯಾಂಶ್ ಎಂಬುವವರು ಜಲಾವೃತಗೊಂಡಿದ್ದ ಚರಂಡಿಗೆ ಕಾಲು ಜಾರಿ ಬಿದ್ದು, ಕೊಚ್ಚಿಕೊಂಡು ಹೋಗಿರುವ ಘಟನೆ ಗಾಝಿಯಾಬಾದ್ ನ ಖೋಡಾ ಕಾಲನಿಯಲ್ಲಿ ನಡೆದಿದೆ.