ವಿವಾಹದ ಉದ್ದೇಶದಿಂದ ಟಿವಿ ನಿರೂಪಕನನ್ನು ಅಪಹರಿಸಿದ ಮಹಿಳೆ
ಹೈದರಾಬಾದ್: ಟಿವಿ ನಿರೂಪಕನೊಬ್ಬನನ್ನು ವಿವಾಹದ ಉದ್ದೇಶದಿಂದ ಅಪಹರಿಸಿದ ಆರೋಪದಲ್ಲಿ ಮಹಿಳಾ ಉದ್ಯಮಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಹೈದರಾಬಾದ್ ಪೊಲೀಸರು ಹೇಳಿದ್ದಾರೆ.
ಸಂಗೀತ ಚಾನಲ್ ನ ನಿರೂಪಕನ ಚಲನವಲನಗಳನ್ನು ತಿಳಿದುಕೊಳ್ಳಲು ಮತ್ತು ಆತನನ್ನು ಹಿಂಬಾಲಿಸಲು ಆತನ ಕಾರಿಗೆ ಟ್ರ್ಯಾಕಿಂಗ್ ಸಾಧನವನ್ನು ಅಳವಡಿಸಿದ್ದಳು ಎಂದು ಆರೋಪಿಸಲಾಗಿದೆ.
ಸುಮಾರು 31 ವರ್ಷ ವಯಸ್ಸಿನ ಮಹಿಳೆ ಡಿಜಿಟಲ್ ಮಾರ್ಕೆಟಿಂಗ್ ವ್ಯವಹಾರವನ್ನು ನಡೆಸುತ್ತಿದ್ದು, ವೈವಾಹಿಕ ವೆಬ್ ಸೈಟ್ ನಲ್ಲಿ ಎರಡು ವರ್ಷ ಹಿಂದೆ ಟಿವಿ ನಿರೂಪಕನ ಫೋಟೊ ನೋಡಿದ್ದು, ಆತನ ಜತೆ ಚಾಟ್ ಮಾಡುತ್ತಿದ್ದಳು. ಆದರೆ ಆ ವೈವಾಹಿಕ ಖಾತೆಯನ್ನು ಹೊಂದಿದ್ದ ವ್ಯಕ್ತಿ ತನ್ನ ಸ್ವಂತ ಫೋಟೊ ಬದಲಾಗಿ ಟಿವಿ ನಿರೂಪಕನ ಫೋಟೊ ಬಳಸಿದ್ದ ಎನ್ನುವುದು ಆಕೆಗೆ ತಿಳಿದುಬಂತು.
ನಂತರ ಟಿವಿ ನಿರೂಪಕನ ಫೋನ್ ನಂಬರ್ ಹುಡುಕಿ, ಇನ್ಸ್ಟಂಟ್ ಮೆಸ್ಸೇಜಿಂಗ್ ಆ್ಯಪ್ ಮೂಲಕ ಸಂಪರ್ಕಿಸಿದ್ದಳು. ವೈವಾಹಿಕ ವೆಬ್ ಸೈಟ್ ಖಾತೆಯಲ್ಲಿ ನನ್ನ ಫೋಟೊವನ್ನು ಬೇರೆಯವರು ಬಳಸಿದ್ದಕ್ಕೆ ದೂರು ನೀಡಲಾಗಿದೆ ಎಂದು ಮಹಿಳೆಗೆ ನಿರೂಪಕ ಹೇಳಿದ ಬಳಿಕ ಕೂಡಾ ಮೆಸೇಜ್ ಮುಂದುವರಿಸಿದ್ದಳು. ಆಕೆಯ ನಂಬರ್ ಬ್ಲಾಕ್ ಮಾಡಿದ ಬಳಿಕವೂ ಆತನನ್ನೇ ವಿವಾಹವಾಗಬೇಕು ಎಂಬ ಉದ್ದೇಶದಿಂದ ಅಪಹರಿಸಿದಳು ಎಂದು ಪೊಲೀಸರು ಹೇಳಿದ್ದಾರೆ.
ನಾಲ್ಕು ಮಂದಿಯನ್ನು ಅಪಹರಣಕ್ಕೆ ಬಾಡಿಗೆಗೆ ಪಡೆದು ನಿರೂಪಕನ ಚಲನ ವಲನಗಳ ಮೇಲೆ ನಿಗಾ ಇಟ್ಟು ಅಪಹರಿಸಿದ್ದಳು ಎಂದು ತಿಳಿದುಬಂದಿದೆ.