ಕುತೂಹಲ ಮೂಡಿಸಿದ ಪರ್ವೇಶ್ ವರ್ಮಾ - ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್ ಭೇಟಿ

Update: 2025-02-09 14:52 IST
ಕುತೂಹಲ ಮೂಡಿಸಿದ ಪರ್ವೇಶ್ ವರ್ಮಾ - ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್ ಭೇಟಿ

ಪರ್ವೇಶ್ ವರ್ಮಾ (PTI) 

  • whatsapp icon

ಹೊಸದಿಲ್ಲಿ: ದಿಲ್ಲಿಯ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಕುತೂಹಲಕರ ಘಟ್ಟ ತಲುಪಿದ್ದು, ಈ ನಡುವೆ, ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಪರಾಭವಗೊಳಿಸಿರುವ ಬಿಜೆಪಿ ನಾಯಕ ಪರ್ವೇಶ್ ವರ್ಮಾ ಅವರು ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರನ್ನು ಭೇಟಿಯಾದರು.

ಶನಿವಾರ ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, 70 ಮಂದಿ ಸದಸ್ಯ ಬಲದ ದಿಲ್ಲಿ ವಿಧಾನಸಭೆಯಲ್ಲಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಸ್ಪಷ್ಟ ಬಹುಮತ ಗಳಿಸಿರುವ ಬಿಜೆಪಿ, ಸರಕಾರ ರಚನೆಗೆ ಸಜ್ಜಾಗಿದೆ.

ಇದರ ಬೆನ್ನಿಗೇ, ದಿಲ್ಲಿಯ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಗರಿಗೆದರಿದ್ದು, ಪರ್ವೇಶ್ ವರ್ಮಾ ಅವರು ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕೃತ ನಿವಾಸವಾದ ‘ರಾಜ ನಿವಾಸ’ಕ್ಕೆ ಭೇಟಿ ನೀಡುವ ಮೂಲಕ ಆ ಚರ್ಚೆಗೆ ಮತ್ತಷ್ಟು ಕಿಡಿ ಹೊತ್ತಿಸಿದ್ದಾರೆ.

ಆಪ್ ಮುಖ್ಯಸ್ಥ ಹಾಗೂ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಹೊಸ ದಿಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪರ್ವೇಶ್ ವರ್ಮಾ, ಅವರನ್ನು 4,089 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

ಫಲಿತಾಂಶದ ಬಳಿಕ ಮಾತನಾಡಿದ್ದ ಅವರು, “ದಿಲ್ಲಿ ಪಾಲಿಗೆ ಹೊಸ ಅಧ್ಯಾಯ ಪ್ರಾರಂಭಗೊಂಡಿದೆ. ಎಲ್ಲರೂ ಒಗ್ಗೂಡಿ, ಉಜ್ವಲ ಭವಿಷ್ಯವನ್ನು ನಿರ್ಮಿಸೋಣ” ಎಂದು ಜನತೆಗೆ ಕರೆ ನೀಡಿದ್ದರು.

ಬಿಜೆಪಿಯ ಗೆಲುವನ್ನು ರಾಷ್ಟ್ರ ರಾಜಧಾನಿಯ ಗೆಲುವು ಎಂದು ಬಣ್ಣಿಸಿದ್ದ ಅವರು, “ಇದು ಕೇವಲ ಗೆಲುವಲ್ಲ. ಸುಳ್ಳನ್ನು ತ್ಯಜಿಸಿ ಸತ್ಯವನ್ನು, ಗಿಮಿಕ್ ಗಳ ಬದಲು ಸಮರ್ಥ ಆಡಳಿತವನ್ನು, ವಂಚನೆಯ ಬದಲು ಅಭಿವೃದ್ಧಿಯನ್ನು ಆಯ್ಕೆ ಮಾಡಿದ ದಿಲ್ಲಿ ಜನತೆಯ ಗೆಲುವು” ಎಂದು ಹೇಳಿದ್ದರು.

ಇದೇ ವೇಳೆ, ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ಪಕ್ಷದ ಉನ್ನತ ನಾಯಕರು ನಿರ್ಧರಿಸಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News