ಫಾರೂಕ್, ಉಮರ್‌ ಅಬ್ದುಲ್ಲಾ ರಾತ್ರಿ ಮೋದಿ, ಅಮಿತ್ ಶಾ ಜೊತೆ ರಹಸ್ಯ ಸಭೆ ನಡೆಸುತ್ತಾರೆ: ಗುಲಾಂ ನಬಿ ಆಝಾದ್‌ ಸ್ಫೋಟಕ ಹೇಳಿಕೆ

Update: 2024-02-19 12:17 GMT

ಗುಲಾಂ ನಬಿ ಆಝಾದ್‌ (Photo: PTI)

ಹೊಸದಿಲ್ಲಿ: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳು ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡರಾದ ಉಮರ್‌ ಅಬ್ದುಲ್ಲಾ ಮತ್ತು ಫಾರೂಕ್ ಅಬ್ದುಲ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರ ಜೊತೆಗೆ ರಾತ್ರಿ ಹೊತ್ತು ಜನರ ಕಣ್ತಪ್ಪಿಸಿ ಗೌಪ್ಯ ಸಭೆಗಳನ್ನು ನಡೆಸುತ್ತಾರೆ ಎಂದು ಹಿರಿಯ ರಾಜಕಾರಣಿ ಹಾಗೂ ಡೆಮಾಕ್ರೆಟಿಕ್‌ ಪ್ರೊಗ್ರೆಸ್ಸಿವ್‌ ಆಝಾದ್‌ ಪಕ್ಷದ ಮುಖ್ಯಸ್ಥ ಗುಲಾಂ ನಬಿ ಆಝಾದ್‌ ಆರೋಪಿಸಿದ್ದಾರೆ.

ʼಇಂಡಿಯಾ ಟುಡೆʼ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. “ಫಾರೂಕ್‌ ಮತ್ತು ಉಮರ್‌ ಅಬ್ದುಲ್ಲಾ ಅವರು ಶ್ರೀನಗರದಲ್ಲಿ ಒಂದು ವಿಚಾರ ಹೇಳುತ್ತಾರೆ, ಜಮ್ಮುವಿನಲ್ಲಿ ಇನ್ನೊಂದು ಮಾತು ಹಾಗೂ ದಿಲ್ಲಿಯಲ್ಲಿ ಬೇರೇನನ್ನೋ ಹೇಳುತ್ತಾರೆ,” ಎಂದು ಆಝಾದ್‌ ಹೇಳಿದ್ದಾರೆ.

ಫಾರೂಕ್ ಮತ್ತು ಉಮರ್‌ ಅಬ್ದುಲ್ಲಾ 2014ರಲ್ಲಿ ಬಿಜೆಪಿ ಜೊತೆಗೆ ಲೆಕ್ಕಾಚಾರಿತವಾಗಿ ಮೈತ್ರಿ ಸಾಧಿಸಲು ಯತ್ನಿಸಿದ್ದರು. ಅಪ್ಪ-ಮಗ ಡಬಲ್‌ ಗೇಮ್‌ ಆಡುತ್ತಿದ್ದಾರೆ ಎಂದು ಆರೋಪಿಸಿದ ಆಝಾದ್‌, ಇತ್ತೀಚೆಗೆ ಫಾರೂಕ್ ಅವರು ಭವಿಷ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸೇರುವ ಬಗ್ಗೆ ಸಂದರ್ಶನದವೊಂದರಲ್ಲಿ ನೀಡಿರುವ ಸುಳಿವು ಹಾಗೂ ನಂತರ ಅದನ್ನು ಉಮರ್‌ ಅಬ್ದುಲ್ಲಾ ನಿರಾಕರಿಸಿರುವುದನ್ನು ಉಲ್ಲೇಖಿಸಿದ್ದಾರೆ.

“ಫಾರೂಕ್ ಅವರು ಬಾಯ್ತಪ್ಪಿನಿಂದ ಹಾಗೆ ಹೇಳಿಲ್ಲ. ಫಾರೂಕ್ ಮತ್ತು ಉಮರ್‌ ಇಬ್ಬರೂ ಸರ್ಕಾರ ಮತ್ತು ವಿಪಕ್ಷವನ್ನು ಓಲೈಸಲು ಯತ್ನಿಸುತ್ತಿದ್ದಾರೆ,” ಎಂದು ಆಝಾದ್‌ ಹೇಳಿದರು.

ಜಮ್ಮು ಕಾಶ್ಮೀರದ;ಲ್ಲಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಲು ಪಿಡಿಪಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ಆಗಾಗ ಯತ್ನಿಸಿದೆ ಎಂದೂ ಆಝಾದ್‌ ಆರೋಪಿಸಿರು.

ಜಮ್ಮು ಕಾಶ್ಮೀರದಲ್ಲಿ ವಿಧಿ 370 ರದ್ದುಗೊಳಿಸುವ ಮೊದಲು ಆಗಸ್ಟ್‌ 3, 2019 ರಲ್ಲಿ ಫಾರೂಖ್‌ ಮತ್ತು ಉಮರ್‌ ಅಬ್ದುಲ್ಲಾ ಹಾಗೂ ಮೋದಿ ನಡುವೆ ಸಭೆ ನಡೆದಿತ್ತು. ಈ ನಿರ್ಧಾರದ ಕುರಿತಂತೆ ಅವರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಲಾಗಿತ್ತು ಹಾಗೂ ಮುಖಂಡರನ್ನು ಗೃಹ ಬಂಧನದಲ್ಲಿಡುವ ಕುರಿತು ಸಲಹೆಯನ್ನೂ ನೀಡಿದ್ದರು ಎಂದು ಆಝಾದ್‌ ಹೇಳಿದ್ದಾರೆ.

“ಬಿಜೆಪಿ ಜೊತೆ ಸೇರಿ ಜಮ್ಮು ಕಾಶ್ಮೀರದಲ್ಲಿ ಸಭೆ ನಡೆಸಲು ನ್ಯಾಷನಲ್‌ ಕಾನ್ಫರೆನ್ಸ್‌ ಬಹಳ ಯತ್ನ ನಡೆಸಿತ್ತೆಂಬ ಕುರಿತು ನನಗೆ ತಿಳಿದಿದೆ. ಜಮ್ಮು ಕಾಶ್ಮೀರದಲ್ಲಿ ಯಾವುದೇ ರಾಜಕೀಯ ಸಾಹಸಕ್ಕೆ ಕೈಹಾಕದಂತೆ ಸದನದಲ್ಲೇ ಪ್ರಧಾನಿ ಮೋದಿಗೆ ಹೇಳಿದ್ದೆ,” ಎಂದು ಆಝಾದ್‌ ಹೇಳಿದರು.

“ನಾನು ಅಬ್ದುಲ್ಲಾರಂತೆ ಮೋಸ ಮಾಡುವುದಿಲ್ಲ, ಹಿಂದೂ ಸಹೋದರರನ್ನು ಮೂರ್ಖರನ್ನಾಗಿಸಲು ದೇವಳಗಳಿಗೆ ಭೇಟಿ ನೀಡುವುದಿಲ್ಲ ಹಾಗೂ ತೀವ್ರಗಾಮಿಗಳನ್ನು ಸಂತುಷ್ಟಪಡಿಸಲು ನನ್ನ ದೇಶವನ್ನು ನಿಂದಿಸುವುದಿಲ್ಲ,” ಎಂದು ಆಝಾದ್‌ ಹೇಳಿಕೊಂಡರು.

ಪಿಡಿಪಿ ಮುಖಂಡ ಮುಫ್ತಿ ಮುಹಮ್ಮದ್‌ ಸಯೀದ್‌ ಅವರು 2014 ರಲ್ಲಿ ಬಿಜೆಪಿ ಜೊತೆ ಮೈತ್ರಿಗೆ ಮಾತುಕತೆ ನಡೆಸುತ್ತಿರುವ ವೇಳೆ ಅವರೊಂದಿಗೆ ನಡೆದ ಸಂಭಾಷಣೆಗಳನ್ನು ನೆನಪಿಸಿದ ಆಝಾದ್‌, ಮೈತ್ರಿ ವಿರುದ್ಧ ಸಲಹೆ ನೀಡಿದ್ದಾಗಿ ಹೇಳಿದರು. ಮುಂದೆ ಮುಫ್ತಿ ಅವರೇ ತಮ್ಮ ನಿರ್ಧಾರದ ಬಗ್ಗೆ ವಿಷಾದ ವ್ಯಕ್ತಪಡಿಸಿ ತನ್ನ (ಆಝಾದ್)‌ ದೂರದೃಷ್ಟಿಯನ್ನು ಒಪ್ಪಿಕೊಂಡಿದ್ದರು ಎಂದು ಆಝಾದ್‌ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News