ವಿದ್ಯುತ್ ಶುಲ್ಕದ ಕುರಿತ ಆರ್ ಟಿ ಐ ಅರ್ಜಿಯನ್ನು ಕಡೆಗಣಿಸಿದ ಆರೋಪ ; ಉತ್ತರ ಪ್ರದೇಶ ವಿದ್ಯುತ್ ಇಲಾಖೆಯ ಅಧಿಕಾರಿಗಳ ವಿರುದ್ಧ ಬಂಧನ ವಾರಂಟ್

Update: 2024-02-11 17:02 GMT

Photo: NDTV 

ಹೊಸದಿಲ್ಲಿ : 1911ರಿಂದ ವಿದ್ಯುತ್ ಸಂಪರ್ಕ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಯನ್ನು ಕಡೆಗಣಿಸಿದ ಆರೋಪದಲ್ಲಿ ಉತ್ತರಪ್ರದೇಶ ವಿದ್ಯುತ್ ಇಲಾಖೆಯ ಉನ್ನತ ಅಧಿಕಾರಿಗಳ ವಿರುದ್ಧ ರಾಜ್ಯ ಮಾಹಿತಿ ಆಯೋಗವು ಬಂಧನ ವಾರಂಟ್ ಜಾರಿಗೊಳಿಸಿದೆ. ಅಧೀಕ್ಷಕ ಇಂಜಿನಿಯರ್ ಅನಿಲ್ ವರ್ಮಾ, ಉಪವಿಭಾಗೀಯ ಅಧಿಕಾರಿ ಸರ್ವೇಶ್ ಯಾದವ್ ಹಾಗೂ ಉಪವಿಭಾಗೀಯ ಅಧಿಕಾರಿ ರವಿ ಆನಂದ್ ಬಂಧನ ವಾರಂಟ್ ಎದುರಿಸುತ್ತಿರುವ ಅಧಿಕಾರಿಗಳಾಗಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 18(3) ಹಾಗೂ ನಾಗರಿಕ ವಿಧಿವಿಧಾನಗಳ ಸಂಹಿತೆ (ಸಿಪಿಸಿ) 1908ರ ಅಡಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಬಂಧನ ವಾರಂಟ್ ಜಾರಿಗೊಳಿಸಿರುವುದಾಗಿ ರಾಜ್ಯ ಮಾಹಿತಿ ಆಯುಕ್ತ ಅಜಯ ಕುಮಾರ್ ಉಪ್ರೆಟಿ ರವಿವಾರ ತಿಳಿಸಿದ್ದಾರೆ.

1911ರ ಜನವರಿ 1ರಂದು ವಾರಣಾಸಿಯ ಕಝಕ್ಪುರ ಪ್ರದೇಶದ ನಿವಾಸಿ ಗ್ರಾಹಕ ಉಮಾಶಂಕರ್ ಯಾದವ್ ಅವರ ವಿದ್ಯುತ್ಸಂಪರ್ಕಕ್ಕೆ ವಿದ್ಯುತ್ ಇಲಾಖೆಯು 2.24 ಲಕ್ಷ ಶುಲ್ಕ ವಿಧಿಸಿತ್ತು.

ಶುಲ್ಕದ ವಿರುದ್ಧ ತಗಾದೆ ಎತ್ತಿದ ಯಾದವ್, ಹಣ ಪಾವತಿಸಲು ನಿರಾಕರಿಸಿದ್ದರು. ಯಾದವ್ ವಿರುದ್ಧ ವಿದ್ಯುತ್ ಇಲಾಖೆಯು ಆರ್ಸಿ (ವಸೂಲಾತಿ ಚಲನ್) ಬಿಲ್ ಜಾರಿಗೊಳಿಸಿತ್ತು.

ಶುಲ್ಕವನ್ನು ಸರಿಪಡಿಸುವಂತೆ ಕೋರಿ ಯಾದವ್ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಆದರೆ ಅವರ ದೂರುಗಳು ಅರಣ್ಯ ರೋದನವಾಯಿತು. ಇದರಿಂದ ಹತಾಶಗೊಂಡ ಯಾದವ್ ಆರ್ಟಿಐ ಕಾಯ್ದೆಯ ಮೊರೆ ಹೋಗಿದ್ದರು.

ವಿದ್ಯುತ್ಶುಲ್ಕವನ್ನು ಲೆಕ್ಕಹಾಕಿದ ರೀತಿ ಹಾಗೂ ಪ್ರತಿ ವಿದ್ಯುತ್ ಯೂನಿಟ್ ವೆಚ್ಚ ಸೇರಿದಂತೆ ಕೆಲವು ಪ್ರಶ್ನೆಗಳನ್ನು ಅದು ಉತ್ತರಪ್ರದೇಶದ ವಿದ್ಯುತ್ ನಿಗಮ ನಿಯಮಿತ ಸಂಸ್ಥೆ ಯ ಅಧಿಕಾರಿಗಳಿಗೆ ಕೇಳಿತ್ತು.

ಆದರೆ ಮಾಹಿತಿ ಆಯೋಗವು ಪುನರಾವರ್ತಿಯಾಗಿ ಸಮನ್ಸ್ಗಳನ್ನು ಜಾರಿಗೊಳಿಸಿದ ಹೊರತಾಗಿಯೂ, ಅವುಗಳಿಗೆ ಉತ್ತರಿಸಲು ವಿದ್ಯುತ್ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಆಯೋಗವು ಅವರಿಗೆ ಬಂಧನ ವಾರಂಟ್ ಜಾರಿಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News