ತಮ್ಮ ಭದ್ರ ಕೋಟೆಯಿಂದ ಯೂಸುಫ್ ಪಠಾಣ್ ರನ್ನು ಕಣಕ್ಕಿಳಿಸಿದ ಟಿಎಂಸಿ ; ಅಧೀರ್ ರಂಜನ್ ಪ್ರತಿಕ್ರಿಯಿಸಿದ್ದು ಹೀಗೆ..

Update: 2024-03-10 14:22 GMT

Photo: ndtv

ಕೋಲ್ಕತಾ: ಲೋಕಸಭಾ ನಾಯಕ ಅಧೀರ್ ರಂಜನ್ ಚೌಧುರಿ ಪ್ರತಿನಿಧಿಸುತ್ತಿರುವ, ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾದ ಬಹರಂಪುರ್ ನಿಂದ, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಯೂಸುಫ್ ಪಠಾಣ್ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಕಾಂಗ್ರೆಸ್ ಪಕ್ಷವಿನ್ನೂ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಬೇಕಿದ್ದರೂ, ಬಹರಂಪುರ್ ನಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅಧೀರ್ ರಂಜನ್ ಚೌಧುರಿ ಇದೇ ಕ್ಷೇತ್ರದಿಂದ ಮರು ಆಯ್ಕೆ ಬಯಸುವ ಸಾಧ್ಯತೆ ಇದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಧೀರ್ ರಂಜನ್ ಚೌಧುರಿ, ಒಂದು ವೇಳೆ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೇನಾದರೂ ಯೂಸುಫ್ ಪಠಾಣ್ ಅವರಿಗೆ ಗೌರವ ನೀಡುವ ಬಯಕೆ ಇದ್ದಿದ್ದರೆ, ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಬೇಕಿತ್ತು ಎಂದು ಸಲಹೆ ನೀಡಿದ್ದಾರೆ.

“ಹೊರಗಿನವರು ರಾಜ್ಯಸಭೆಗೆ ಪಶ್ಚಿಮ ಬಂಗಾಳದಿಂದ ನಾಮನಿರ್ದೇಶನಗೊಂಡಿದ್ದಾರೆ. ಒಂದು ವೇಳೆ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಯೂಸುಫ್ ಪಠಾಣ್ ಅವರಿಗೆ ಗೌರವ ಸಲ್ಲಿಸುವ ಬಯಕೆ ಇದ್ದಿದ್ದೆ ಆಗಿದ್ದರೆ, ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಬೇಕಿತ್ತು. ಮಮತಾ ಬ್ಯಾನರ್ಜಿ ಅವರಿಗೆ ಉತ್ತಮ ಉದ್ದೇಶ ಇದ್ದದ್ದೇ ಆಗಿದ್ದರೆ, ಅವರು ಗುಜರಾತ್ ನಲ್ಲಿ ಯೂಸುಫ್ ಪಠಾಣ್ ಅವರಿಗೆ ಒಂದು ಕ್ಷೇತ್ರ ಒದಗಿಸಿಕೊಡುವಂತೆ ಇಂಡಿಯಾ ಮೈತ್ರಿಕೂಟಕ್ಕೆ ಮನವಿ ಮಾಡಬೇಕಿತ್ತು. ಆದರೆ, ಅವರನ್ನು ಇಲ್ಲಿ ಸಾಮಾನ್ಯ ಜನರನ್ನು ಧ್ರುವೀಕರಣಗೊಳಿಸುವ ಮೂಲಕ ಬಿಜೆಪಿಗೆ ನೆರವು ನೀಡಿ, ಕಾಂಗ್ರೆಸ್ ಪಕ್ಷವನ್ನು ಪರಾಭವಗೊಳಿಸಲು ಸ್ಪರ್ಧೆಗೆ ಇಳಿಸಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.

ಅವರಂತಹ ನಾಯಕಿಯನ್ನು ಯಾವುದೇ ರಾಜಕೀಯ ಪಕ್ಷಗಳೂ ನಂಬಕೂಡದು ಎಂಬುದನ್ನು ಮಮತಾ ಬ್ಯಾನರ್ಜಿ ಸಾಬೀತು ಪಡಿಸಿದ್ದಾರೆ ಎಂದೂ ಅವರು ಕಿಡಿ ಕಾರಿದ್ದಾರೆ ಎಂದು ndtv ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News