ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಮುನ್ನ ಕೇಂದ್ರದಿಂದ ಮಾಧ್ಯಮಗಳಿಗೆ ಸಲಹಾಸೂಚಿ

Update: 2024-01-20 15:59 GMT

ರಾಮ ಮಂದಿರ | Photo: PTI 

ಹೊಸದಿಲ್ಲಿ: ಅಯೋಧ್ಯೆಯಲ್ಲಿ ಜ.22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ದೇಶಾದ್ಯಂತ ಸಂಭ್ರಮಾಚರಣೆಗಳ ಮುನ್ನ ಶನಿವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ಸುಳ್ಳು ಅಥವಾ ತಿರುಚಲ್ಪಟ್ಟ, ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡಬಹುದಾದ ಯಾವುದೇ ವಿಷಯವನ್ನು ಪ್ರಕಟಿಸುವುದರಿಂದ ಮತ್ತು ಪ್ರಸಾರಿಸುವುದರಿಂದ ದೂರವಿರುವಂತೆ ಮಾಧ್ಯಮಗಳಿಗೆ ಸೂಚಿಸಿದೆ.

ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗವನ್ನುಂಟು ಮಾಡಬಹುದಾದ ಕೆಲವು ಪರಿಶೀಲಿಸಲ್ಪಡದ,ಪ್ರಚೋದನಾಕಾರಿ ಮತ್ತು ನಕಲಿ ಸಂದೇಶಗಳನ್ನು, ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುತ್ತಿರುವುದನ್ನು ಗಮನಿಸಲಾಗಿದೆ ಎಂದು ವೃತ್ತಪತ್ರಿಕೆಗಳು, ಟಿವಿ ಸುದ್ದಿವಾಹಿನಿಗಳು, ಡಿಜಿಟಲ್ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುದ್ದಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಪ್ರಕಾಶಕರಿಗೆ ಹೊರಡಿಸಲಾಗಿರುವ ಸಲಹಾಸೂಚಿಯಲ್ಲಿ ಸಚಿವಾಲಯವು ತಿಳಿಸಿದೆ.

ಜ.22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ ಎಂದು ಬೆಟ್ಟು ಮಾಡಿರುವ ಸಚಿವಾಲಯವು, ಕೇಬಲ್ ಟಿವಿ ಜಾಲಗಳ ನಿಯಂತ್ರಣ ಕಾಯ್ದೆ, ಪತ್ರಿಕಾ ಮಂಡಳಿ ಕಾಯ್ದೆ, ಮಾಹಿತಿ ತಂತ್ರಜ್ಞಾನ(ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿಗಳು 2021ರ ಅಡಿ ನಿಬಂಧನೆಗಳನ್ನು ಉಲ್ಲೇಖಿಸಿದೆ. ಈ ನಿಬಂಧನೆಗಳಿಗೆ ಅನುಗುಣವಾಗಿ ಸುಳ್ಳು ಅಥವಾ ತಿರುಚಲ್ಪಟ್ಟ, ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡಬಹುದಾದ ಯಾವುದೇ ವಿಷಯವನ್ನು ಪ್ರಕಟಿಸದಂತೆ ಮತ್ತು ಪ್ರಸಾರಿಸದಂತೆ ಅದು ಮಾಧ್ಯಮಗಳಿಗೆ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News