ತಮಿಳುನಾಡಿನಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಅಂತ್ಯ

ತಮಿಳುನಾಡಿನ ವಿರೋಧ ಪಕ್ಷ ಎಐಎಡಿಎಂಕೆ 2024 ರ ಸಾರ್ವತ್ರಿಕ ಚುನಾವಣೆಗೆ ಮೊದಲು ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿನ ಮೈತ್ರಿಯನ್ನು ಅಧಿಕೃತವಾಗಿ ಕೊನೆಗೊಳಿಸಿದೆ

Update: 2023-09-25 13:21 GMT

 K. Palaniswami with PM Narendra Modi | Photo: ANI 

ಚೆನ್ನೈ: ತಮಿಳುನಾಡಿನ ವಿರೋಧ ಪಕ್ಷ ಎಐಎಡಿಎಂಕೆ 2024 ರ ಸಾರ್ವತ್ರಿಕ ಚುನಾವಣೆಗೆ ಮೊದಲು ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿನ ಮೈತ್ರಿಯನ್ನು ಅಧಿಕೃತವಾಗಿ ಕೊನೆಗೊಳಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿದೆ.

ಚೆನ್ನೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಎಐಎಡಿಎಂಕೆ ಉಪ ಸಂಯೋಜಕ ಕೆ.ಪಿ. ಮುನುಸಾಮಿ “ಇಂದಿನಿಂದ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದೊಂದಿಗಿನ ಎಲ್ಲಾ ಸಂಬಂಧಗಳನ್ನು ಎಐಎಡಿಎಂಕೆ ಮುರಿಯುತ್ತಿದೆ. ಬಿಜೆಪಿಯ ರಾಜ್ಯ ನಾಯಕತ್ವವು ನಮ್ಮ ಮಾಜಿ ನಾಯಕರು, ನಮ್ಮ ಕಾರ್ಯಕರ್ತರು ಮತ್ತು ನಮ್ಮ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಬಗ್ಗೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅನಗತ್ಯ ಟೀಕೆಗಳನ್ನು ಮಾಡುತ್ತಿದೆ” ಎಂದು ಅವರು ಹೇಳಿದ್ದಾರೆ.

ಈ ಕುರಿತು ನಡೆದ ಸಭೆಯಲ್ಲಿ ಪಕ್ಷದ ಶಾಸಕರು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಪಕ್ಷವು ಹೊಸ ಮೈತ್ರಿಕೂಟವನ್ನು ರಚಿಸುತ್ತದೆ ಮತ್ತು ಮುಂಬರುವ ಸಂಸತ್ತಿನ ಚುನಾವಣೆಯನ್ನು ಸ್ವತಃ ಎದುರಿಸಲಿದೆ ಎಂದು ಅವರು ಘೋಷಿಸಿದರು.

ಕಳೆದ ಸೋಮವಾರ, ಎಐಎಡಿಎಂಕೆ ಹಿರಿಯ ನಾಯಕ ಡಿ.ಜಯಕುಮಾರ್ ಅವರು ಬಿಜೆಪಿಯೊಂದಿಗೆ ಮೈತ್ರಿ ಮುರಿಯುವುದಾಗಿ ಹೇಳಿದ್ದರು. ಎಐಎಡಿಎಂಕೆಯ ಮಾಜಿ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕಾಗಿ ಬಿಜೆಪಿ ತಮಿಳುನಾಡು ರಾಜ್ಯ ಮುಖ್ಯಸ್ಥ ಕೆ.ಅಣ್ಣಾಮಲೈ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಎಐಎಡಿಎಂಕೆ – ಬಿಜೆಪಿ 2019ರಿಂದ ಮೈತ್ರಿ ಮಾಡಿಕೊಂಡಿದ್ದವು. ದ್ರಾವಿಡ ನೇತಾರ ಮತ್ತು ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಕುರಿತು ಅಣ್ಣಾಮಲೈ ಹೇಳಿಕೆಯ ನಂತರ ಬಿಜೆಪಿ ಮತ್ತು ಎಐಎಡಿಎಂಕೆಯೊಂದಿಗಿನ ಮೈತ್ರಿಯಲ್ಲಿ ಅಂತರ ಕಾಣಿಸಿಕೊಂಡಿತ್ತು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News