ಬಿಜೆಪಿಯೊಂದಿಗೆ ಮೈತ್ರಿಯಿಲ್ಲ ಎಂದ ಎಐಎಡಿಎಂಕೆ
ಚೆನ್ನೈ: ಎಐಎಡಿಎಂಕೆ ಸಂಸ್ಥಾಪಕ ಎಂಜಿಆರ್ ಅವರ ರಾಜಕೀಯ ಗುರು ಸಿ.ಎನ್.ಅಣ್ಣಾದುರೈ ಕುರಿತು ತಮಿಳುನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ನೀಡಿರುವ ಹೇಳಿಕೆಯಿಂದ ಆಕ್ರೋಶಗೊಂಡಿರುವ ಎಐಎಡಿಎಂಕೆ, ಸದ್ಯ ಎಐಎಡಿಎಂಕೆ-ಬಿಜೆಪಿ ನಡುವಿನ ಮೈತ್ರಿ ಮುರಿದು ಬಿದ್ದಿದೆ ಎಂದು ಸೋಮವಾರ ಪ್ರಕಟಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಐಎಡಿಎಂಕೆ ನಾಯಕ ಡಿ.ಜಯಕುಮಾರ್, ಈ ವಿಷಯದ ಕುರಿತು ತಾನು ಪಕ್ಷದ ನಿಲುವನ್ನು ಪ್ರತಿಧ್ವನಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ವಿಷಯವನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಬಿಜೆಪಿಯ ಉನ್ನತ ಮೂಲಗಳು ndtv ಸುದ್ದಿ ಸಂಸ್ಥೆಗೆ ತಿಳಿಸಿವೆ.
“ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷರಾಗಿರಲು ನಾಲಾಯಕ್. ತಮ್ಮನ್ನು ತಾವು ಬಿಂಬಿಸಿಕೊಳ್ಳಲು ನಿಧನರಾಗಿರುವ ನಾಯಕರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ” ಎಂದು ಜಯಕುಮಾರ್ ಕಿಡಿ ಕಾರಿದ್ದಾರೆ. ಇದಕ್ಕೂ ಮುನ್ನ ಎಐಎಡಿಎಂಕೆಯ ಅಧಿನಾಯಕಿ ದಿ. ಜೆ.ಜಯಲಲಿತಾ ಕುರಿತು ಅಣ್ಣಾಮಲೈ ನೀಡಿದ್ದ ಹೇಳಿಕೆಯು ಜೂನ್ ತಿಂಗಳಲ್ಲಿ ಮೈತ್ರಿ ಮುರಿದು ಬೀಳುವ ಹಂತಕ್ಕೆ ತಂದು ನಿಲ್ಲಿಸಿತ್ತು.
ಆ ಸಮಯದಲ್ಲಿ ಇಂತಹ ಹೇಳಿಕೆಗಳನ್ನು ನೀಡುವುದರಿಂದ ದೂರ ಉಳಿಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ನಮ್ಮ ಪಕ್ಷವು ಆಗ್ರಹಿಸಿತ್ತು. ಮಾಜಿ ಮುಖ್ಯಮಂತ್ರಿಗೆ ಎಸಗುವ ಯಾವುದೇ ಅವಮಾನವನ್ನು ಪಕ್ಷದ ಕಾರ್ಯಕರ್ತರು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.