ಅಜಿತ್ ಪವಾರ್ ನೇತೃತ್ವದ ಬಣವೇ ನಿಜವಾದ ಎನ್‌ಸಿಪಿ : ಚುನಾವಣಾ ಆಯೋಗ ಆದೇಶ
Update: 2024-02-06 15:24 GMT
ಮುಂಬೈ :‘ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ’ ಎಂದ ಚುನಾವಣಾ ಆಯೋಗ ಆದೇಶ ನೀಡಿರುವುದಾಗಿ ವರದಿಯಾಗಿದೆ. ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ಸೋದರಳಿಯನಾಗಿದ್ದು, ಸದ್ಯ ಮಹಾರಾಷ್ಟ್ರದ ಏಕನಾಥ್ ಶಿಂದೆ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾರೆ.
ಈ ತೀರ್ಪಿನ ಮೂಲಕ ಇಂಡಿಯಾ ಮೈತ್ರಿಯ ನಾಯಕರಾಗಿದ್ದ ಎನ್ ಸಿ ಪಿ ಸಂಸ್ಥಾಪಕರಲ್ಲೊಬ್ಬರಾದ ಶರದ್ ಪವಾರ್‌ಗೆ ದೊಡ್ಡ ಹಿನ್ನಡೆಯಾಗಿದ್ದು, ಎನ್‌ಸಿಪಿ ಪಕ್ಷದ ಚಿಹ್ನೆಯಾದ ಗಡಿಯಾರ ಹಾಗೂ ಎನ್‌ಸಿಪಿ ಹೆಸರನ್ನು ಕಳೆದುಕೊಂಡಿದ್ದಾರೆ.
ಅಜಿತ್ ಪವಾರ್ ನೇತೃತ್ವದ ಬಣದ ಪರವಾಗಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ವಿಚಾರದ ವಿವಾದವನ್ನು ಇತ್ಯರ್ಥ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದರೊಂದಿಗೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯೇ ನಿಜವಾದ ಪಕ್ಷ ಎಂದು ಚುನಾವಣಾ ಆಯೋಗ ಪರಿಗಣಿಸಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.