ತಾಜ್‌ ಮಹಲ್‌ ನಲ್ಲಿ ವಾರ್ಷಿಕ ಉರೂಸ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಅಖಿಲ ಭಾರತ ಹಿಂದೂ ಮಹಾಸಭಾ

Update: 2024-02-03 16:43 GMT

Photo: indiatoday.com 

ಆಗ್ರಾ: ಇಲ್ಲಿಯ ಇತಿಹಾಸ ಪ್ರಸಿದ್ಧ ತಾಜ್‌ಮಹಲ್‌ ನಲ್ಲಿ ಉರೂಸ್ ಆಚರಣೆಗೆ ನಿಷೇಧಾಜ್ಞೆಯನ್ನು ಕೋರಿ ಅಖಿಲ ಭಾರತ ಹಿಂದು ಮಹಾಸಭಾ (ಎಬಿಎಚ್ಎಂ) ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದೆ. ಉರೂಸ್ ಗೆ ಮುಕ್ತ ಪ್ರವೇಶವನ್ನೂ ಅದು ಪ್ರಶ್ನಿಸಿದೆ. ಅರ್ಜಿಯನ್ನು ಅಂಗೀಕರಿಸಿರುವ ನ್ಯಾಯಾಲಯವು, ಮಾ.4ಕ್ಕೆ ವಿಚಾರಣೆಯನ್ನು ನಿಗದಿಗೊಳಿಸಿದೆ.

ಮೂರು ದಿನಗಳ ಉರೂಸ್ ಈ ವರ್ಷ ಫೆ.6ರಿಂದ 8ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ 1653ರಲ್ಲಿ ಯಮುನಾ ನದಿಯ ದಂಡೆಯ ಮೇಲೆ ತಾಜಮಹಲ್ ಅನ್ನು ನಿರ್ಮಿಸಿದ್ದ ಮುಘಲ್ ಚಕ್ರವರ್ತಿ ಶಹಜಹಾನ್ ಅವರನ್ನು ಸ್ಮರಿಸಲಾಗುತ್ತದೆ. ಹಿಂದೂ ಮಹಾಸಭಾ ಉರೂಸ್ ಗೆ ಕಾಯಂ ನಿಷೇಧಾಜ್ಞೆಯನ್ನು ಕೋರಿ ಅರ್ಜಿ ಸಲ್ಲಿಸಿದೆ. ಉರೂಸ್ ಗೆ ಮುಕ್ತ ಪ್ರವೇಶವನ್ನೂ ಅದು ಆಕ್ಷೇಪಿಸಿದೆ ಎಂದು ಎಬಿಎಚ್ಎಂ ಪರ ವಕೀಲ ಅನಿಲ್ ಕುಮಾರ್ ತಿವಾರಿ ಸುದ್ದಿಸಂಸ್ಥೆಗೆ ತಿಳಿಸಿದರು.

ಮುಘಲರು ಮತ್ತು ಬ್ರಿಟಿಷರು ತಾಜ್‌ಮಹಲ್‌ನೊಳಗೆ ಉರೂಸ್ ನಡೆಸಲು ಅವಕಾಶ ನೀಡಿರಲಿಲ್ಲ ಎನ್ನುವುದನ್ನು ಬಹಿರಂಗಗೊಳಿಸಿರುವ ಆರ್ ಟಿ ಐ ಉತ್ತರದ ಆಧಾರದಲ್ಲಿ ನ್ಯಾಯಾಲಯಕ್ಕೆ ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಎಬಿಎಚ್ಎಂ ವಕ್ತಾರ ಸಂಜಯ ಜಾಟ್ ಹೇಳಿದರು. ಆಗ್ರಾದ ಇತಿಹಾಸಕಾರ ರಾಜಕಿಶೋರ ರಾಜೆ ಅವರು ಆರ್‌ ಟಿ ಐ ಕಾಯ್ದೆಯಡಿ ಭಾರತೀಯ ಪುರಾತತ್ವ ಸರ್ವೆ(ಎಎಸ್ಐ)ಗೆ ಅರ್ಜಿಯನ್ನು ಸಲ್ಲಿಸಿದ್ದರು. ತಾಜ್‌ಮಹಲ್‌ ಆವರಣದಲ್ಲಿ ಉರೂಸ್ ಆಚರಣೆ ಮತ್ತು ನಮಾಝಿಗೆ ಅನುಮತಿ ನೀಡಿದ್ದು ಯಾರು ಎಂದು ಅವರು ಅರ್ಜಿಯಲ್ಲಿ ಕೇಳಿದ್ದರು. ಮುಘಲರಾಗಲೀ ಅಥವಾ ಬ್ರಿಟಿಷರಾಗಲೀ ಉರೂಸ್ ಆಚರಣೆಗೆ ಅವಕಾಶ ನೀಡಿರಲಿಲ್ಲ. ಭಾರತ ಸರಕಾರವೂ ಇದಕ್ಕೆ ಅನುಮತಿಯನ್ನು ನೀಡಿಲ್ಲ ಎಂದು ಎಎಸ್ಐ ಉತ್ತರದಲ್ಲಿ ತಿಳಿಸಿದೆ. ಹೀಗಾಗಿ ಈ ಉತ್ತರದ ಆಧಾರದಲ್ಲಿ ಸೈಯ್ಯದ್ ಇಬ್ರಾಹಿಂ ಝೈದಿ ನೇತೃತ್ವದ ಉರೂಸ್ ಸಮಿತಿಯು ತಾಜ್‌ಮಹಲ್ ನಲ್ಲಿ ಉರೂಸ್ ಆಚರಿಸುವುದಕ್ಕೆ ನಿಷೇಧಾಜ್ಞೆಯನ್ನು ಕೋರಿದ್ದೇವೆ ಎಂದೂ ಜಾಟ್ ತಿಳಿಸಿದರು.

ಮೂರು ದಿನಗಳ ಉರೂಸ್‌ ನ ಲ್ಲಿ ಚಾದರ್ ಪೋಶಿ, ಸಂದಲ್, ಗುಸುಲ್, ಕುಲ್ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತವೆ. ಉರೂಸಿನ ಕೊನೆಯ ದಿನ 1,880 ಮೀ.ಅಥವಾ ಅದಕ್ಕೂ ಹೆಚ್ಚಿನ ಉದ್ದದ ಚಾದರನ್ನು ಸಮರ್ಪಿಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News