ನಾಳೆ ನನ್ನೊಂದಿಗೆ ಎಲ್ಲಾ ಆಪ್ ನಾಯಕರು ಬಿಜೆಪಿ ಕಚೇರಿಗೆ ಬರುತ್ತಾರೆ, ತಾಕತ್ತಿದ್ದರೆ ಬಂಧಿಸಿ : ಪ್ರಧಾನಿ ಮೋದಿಗೆ ಸವಾಲೆಸೆದ ಅರವಿಂದ್ ಕೇಜ್ರಿವಾಲ್
ಹೊಸದಿಲ್ಲಿ : ಮೇ 19 ರಂದು ರವಿವಾರ, ನಾಳೆ ನನ್ನೊಂದಿಗೆ ಎಲ್ಲಾ ಆಪ್ ನಾಯಕರು ಬಿಜೆಪಿ ಕಚೇರಿಗೆ ಬರುತ್ತಾರೆ, ತಾಕತ್ತಿದ್ದರೆ ಪ್ರಧಾನಿ ಮೋದಿ ಅವರು ನಮ್ಮಲ್ಲಿ ಯಾರನ್ನು ಬೇಕಾದರೂ ಬಂಧಿಸಬಹುದು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲೆಸೆದಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತಮ್ಮ ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಆರೋಪದಲ್ಲಿ ತಮ್ಮ ಸಹಾಯಕ ಬಿಭವ್ ಕುಮಾರ್ ಅವರನ್ನು ಬಂಧಿಸಿದ ಕೆಲವೇ ಗಂಟೆಗಳ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, “ಎಎಪಿ ಸಂಸದ ರಾಘವ್ ಚಡ್ಡಾ ಮತ್ತು ದಿಲ್ಲಿ ಸಚಿವರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರನ್ನೂ ಜೈಲಿಗೆ ಕಳುಹಿಸುವುದಾಗಿ ಬಿಜೆಪಿ ಹೇಳುತ್ತಿದೆ. ಆಪ್ ನಾಯಕರನ್ನು ಜೈಲಿಗೆ ಕಳುಹಿಸುವ ಮೂಲಕ ತಮ್ಮ ಪಕ್ಷವನ್ನು ಹತ್ತಿಕ್ಕಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಸಂಜಯ್ ಸಿಂಗ್ ಅವರನ್ನು ಜೈಲಿಗೆ ಕಳುಹಿಸುವ ಆಟವಾಡುತ್ತಿದ್ದಾರೆ. ನಾನು, ನನ್ನ ಪಕ್ಷದ ಶಾಸಕರು ಮತ್ತು ಸಂಸದರೊಂದಿಗೆ ನಾಳೆ ಮಧ್ಯಾಹ್ನ ಬಿಜೆಪಿ ಕಚೇರಿಗೆ ಹೋಗುತ್ತೇವೆ. ಪ್ರಧಾನಿ ಅವರು ಯಾರನ್ನು ಬೇಕಾದರೂ ಜೈಲಿಗೆ ಕಳುಹಿಸಬಹುದು ಎಂದು ಕೇಜ್ರಿವಾಲ್ ಸವಾಲೆಸೆದರು.
"ಎಎಪಿಯು ಒಂದು ಶಕ್ತಿ. ನೀವು ಎಷ್ಟು ಎಎಪಿ ನಾಯಕರನ್ನು ಜೈಲಿನಲ್ಲಿಟ್ಟರೂ, ದೇಶವು ನೂರು ಪಟ್ಟು ಹೆಚ್ಚು ನಾಯಕರನ್ನು ಹುಟ್ಟುಹಾಕುತ್ತದೆ" ಎಂದು ಕೇಜ್ರಿವಾಲ್ ಹೇಳಿದರು.
ದಿಲ್ಲಿಯಲ್ಲಿ ತನ್ನ ಸರ್ಕಾರವು ಉತ್ತಮ ಶಾಲೆಗಳನ್ನು ನಿರ್ಮಿಸಿದೆ. ಮೊಹಲ್ಲಾ ಚಿಕಿತ್ಸಾಲಯಗಳನ್ನು ಸ್ಥಾಪಿಸಿದೆ. ಉಚಿತ ಚಿಕಿತ್ಸೆಯನ್ನು ಒದಗಿಸಿದೆ. ನಗರದಲ್ಲಿ 24 ಗಂಟೆಯೂ ಉಚಿತ ವಿದ್ಯುತ್ ಪೂರೈಕೆಯನ್ನು ನೀಡಿದೆ. ಇದೆಲ್ಲವೂ ಆಪ್ ಮಾಡಿದ ತಪ್ಪುಗಳು. ಇದನ್ನು ಬಿಜೆಪಿಯಿಂದ ಮಾಡಲಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ದಿಲ್ಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕೇಜ್ರಿವಾಲ್ ಅವರಿಗೆ, ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಸಾರ್ವತ್ರಿಕ ಚುನಾವಣೆಯ ಕೊನೆಯ ಹಂತದ ಮತದಾನದ ನಂತರ ಜೂನ್ 2 ರಂದು ಅವರು ಮತ್ತೆ ಜೈಲಿಗೆ ವಾಪಾಸಾಗಬೇಕಾಗುತ್ತದೆ.