ಬಿಜೆಪಿ ಚಟುವಟಿಕೆ ಮತ್ತು ಮದುವೆಗಳಿಗೆ ಹಾಜರಾಗಲು ಬಾಡಿಗೆ ವಿಮಾನಗಳಿಗೆ ಸಾರ್ವಜನಿಕ ಹಣವನ್ನು ವ್ಯಯಿಸಿದ ಅಸ್ಸಾಂ ಸಿಎಂ ಶರ್ಮಾ ; ಆರ್‌ಟಿಐ ಉತ್ತರದಿಂದ ಬಹಿರಂಗ
ಗುವಾಹಟಿ : ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ರಾಜ್ಯದ ಒಳಗೆ ಮತ್ತು ಹೊರಗೆ ಬಿಜೆಪಿಗಾಗಿ ಪ್ರಚಾರ ಕಾರ್ಯಗಳು, ಪಕ್ಷದ ಸಭೆಗಳು ಹಾಗೂ ಮದುವೆಗಳಿಗೆ ಹಾಜರಾಗಲು ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳನ್ನು ಬಾಡಿಗೆಗೆ ಪಡೆಯಲು ಕೋಟ್ಯಂತರ ರೂ.ಗಳಷ್ಟು ರಾಜ್ಯ ಸರಕಾರದ ಹಣವನ್ನು ಬಳಸಿದ್ದರು. The Cross Current 2022, ಆ.26ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಅಸ್ಸಾಂ ಸರಕಾರವು ಇತ್ತೀಚಿಗೆ ನೀಡಿರುವ ಉತ್ತರವು ಇದನ್ನು ಬಹಿರಂಗಗೊಳಿಸಿದೆ. ಇದು ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು thewire.com ವರದಿ ಮಾಡಿದೆ.
ಯಾವುದೇ ಸರಕಾರವು ಅನಧಿಕೃತ ಕೆಲಸಗಳಿಗಾಗಿ ಸಾರ್ವಜನಿಕ ಹಣವನ್ನು ಬಳಸುವಂತಿಲ್ಲ. ಸಹಜವಾಗಿಯೇ ಈ ಅನಧಿಕೃತ ಕೆಲಸಗಳಲ್ಲಿ ಪಕ್ಷಕ್ಕೆ ಸಂಬಂಧಿಸಿದ ಚಟುವಟಿಕೆಗಳು ಮತ್ತು ಖಾಸಗಿ ಪಾರ್ಟಿಗಳಿಗೆ ಹಾಜರಾಗುವುದು ಸೇರಿವೆ. ಇವ್ಯಾವುದಕ್ಕೂ ತೆರಿಗೆದಾರರ ಹಣವನ್ನು ವ್ಯಯಿಸುವಂತಿಲ್ಲ.
ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ರಾಜ್ಯ ಸರಕಾರವು ವಿಧಾನಸಭೆಯಲ್ಲಿ, ಕೇವಲ ಸರಕಾರಿ ಕಾರ್ಯಕ್ರಮಗಳಿಗಾಗಿ ಬಾಡಿಗೆ ವಿಮಾನಗಳಿಗೆ ಹಣವನ್ನು ವ್ಯಯಿಸಲಾಗಿದೆ ಎಂದು ಪ್ರತಿಪಾದಿಸಿತ್ತು.
The Cross Current ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಸಾಮಾನ್ಯ ಆಡಳಿತ ಇಲಾಖೆಯು ಆರಂಭದಲ್ಲಿ ಸ್ಪಂದಿಸಿರಲಿಲ್ಲ. The Cross Current ನ ಮೇಲ್ಮನವಿಯ ಮೇರೆಗೆ ರಾಜ್ಯ ಮಾಹಿತಿ ಆಯೋಗವು ಸೂಚಿಸಿದ ಬಳಿಕವಷ್ಟೇ ಇಲಾಖೆಯ ಅಧೀನ ಕಾರ್ಯದರ್ಶಿಗಳು ಮಾಹಿತಿಗಳನ್ನು ಒದಗಿಸಿದ್ದಾರೆ, ಅದೂ ಭಾಗಶಃ ಮಾತ್ರ.
ಸರಕಾರವು ಒದಗಿಸಿರುವ ಮಾಹಿತಿಗಳು ಭಾಗಶಃ ಆಗಿದ್ದರೂ ಮತ್ತು ಶರ್ಮಾ ಅವರ ಸ್ವಂತ ಸಾಮಾಜಿಕ ಮಾಧ್ಯಮಗಳಿಂದ ಛಾಯಾಚಿತ್ರಗಳ ಪುರಾವೆಯು ಮುಖ್ಯಮಂತ್ರಿಗಳು ಬಿಜೆಪಿಯ ಮಿತ್ರಪಕ್ಷಗಳ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಅಸ್ಸಾಂ ಸರಕಾರದ ಹಣದಿಂದ ಬಾಡಿಗೆ ಹೆಲಿಕಾಪ್ಟರ್‌ಗಳನ್ನು ಬಳಸಿ ಕನಿಷ್ಠ ಐದು ಸಲ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರು ಎನ್ನುವುದನ್ನು ತೋರಿಸಿವೆ.
ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳು ಸೇರಿದಂತೆ ರಾಜ್ಯದ ಹೊರಗೂ ಬಿಜೆಪಿಯ ಪ್ರಚಾರ ಕಾರ್ಯಕ್ಕಾಗಿ ಶರ್ಮಾ ಸಾರ್ವಜನಿಕ ಹಣವನ್ನು ಬಳಸಿದ್ದರು ಎನ್ನುವುದನ್ನು ಆರ್‌ಟಿಐ ಉತ್ತರವು ಬಯಲುಗೊಳಿಸಿದೆ. ಐದು ಮದುವೆ ಸಮಾರಂಭಗಳಿಗೆ ತೆರಳಲು ಬಾಡಿಗೆ ವಿಮಾನಗಳು/ಹೆಲಿಕಾಪ್ಟರ್‌ಗಳಿಗೂ ಶರ್ಮಾ ರಾಜ್ಯ ಸರಕಾರದ ಹಣವನ್ನೇ ಬಳಸಿದ್ದಾರೆ.
ಇಷ್ಟು ಮಾತ್ರವಲ್ಲ, ಹೈದರಾಬಾದ್ ಸೇರಿದಂತೆ ಬಿಜೆಪಿಯ ಸಭೆಗಳಲ್ಲಿ ಪಾಲ್ಗೊಳ್ಳಲು ಶಮಾ ಕನಿಷ್ಠ ಏಳು ಸಲ ರಾಜ್ಯ ಸರಕಾರದ ಹಣದಿಂದ ಬಾಡಿಗೆ ವಿಮಾನಗಳನ್ನು ಬಳಸಿದ್ದಾರೆ ಎನ್ನುವುದನ್ನೂ ಆರ್‌ಟಿಐ ಉತ್ತರವು ತೋರಿಸಿದೆ.