ಅಸ್ಸಾಂ ಶಾಲೆಯಲ್ಲಿ ಬಜರಂಗದಳದಿಂದ ಶಸ್ತ್ರಾಸ್ತ ತರಬೇತಿ ಶಿಬಿರ: ಪ್ರಕರಣ ದಾಖಲಿಸಿದ ಪೊಲೀಸರು
ಹೊಸದಿಲ್ಲಿ: ಅಸ್ಸಾಂ ವಿಧಾನಸಭೆಯಲ್ಲಿನ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ದೇಬಬೃತ್ ಸೈಕಿಯಾ ಅವರು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರಿಗೆ ಪತ್ರ ಬರೆದು ಶಾಲೆಯೊಂದರಲ್ಲಿ ಸ್ಥಳೀಯ ಯುವಕರಿಗೆ ಐದು ದಿನಗಳ ಶಸ್ತ್ರಾಸ್ತ್ರ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದ ರಾಷ್ಟ್ರೀಯ ಬಜರಂಗದಳದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಬೆನ್ನಲ್ಲೇ ಅಸ್ಸಾಂ ಪೊಲೀಸರು ಬಜರಂಗದಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ತರಬೇತಿ ಕಾರ್ಯಕ್ರಮದ ವೀಡಿಯೋ ಜುಲೈ 31ರಂದು ವೈರಲ್ ಆದ ಹಿನ್ನೆಲೆಯಲ್ಲಿ ಸೈಕಿಯಾ ಅವರು ಸಿಎಂಗೆ ಪತ್ರ ಬರೆದಿದ್ದರಲ್ಲದೆ ಈ ತರಬೇತಿಗೆ ಜಿಲ್ಲಾಡಳಿತ ಅನುಮತಿ ನೀಡಿತ್ತೇ ಎಂಬ ಕುರಿತು ತನಿಖೆಗೂ ಕೋರಿದ್ದರು.
ದರ್ರಂಗ್ ಜಿಲ್ಲೆಯ ಮಂಗಲದೋಯಿ ಪ್ರದೇಶದ ಮಹರ್ಷಿ ವಿದ್ಯಾ ಮಂದಿರದಲ್ಲಿ ನಡೆದ ಈ ತರಬೇತಿಯಲ್ಲಿ ಸುಮಾರು 350 ಯುವಕರಿಗೆ ಮಾರ್ಷಲ್ ಆರ್ಟ್ಸ್, ಆಧ್ಯಾತ್ಮಿಕತೆ ಮತ್ತು ರಾಜಕೀಯ ಬಗ್ಗೆ ಕಲಿಸಲಾಗಿತ್ತು ಎನ್ನಲಾಗಿದೆ.
ಇಂತಹ ತರಬೇತಿ ಶಿಬಿರಗಳು 2017 ಹಾಗೂ 2019 ರಲ್ಲಿ ನಡೆದಿದ್ದವು ಹಾಗೂ ಕಾಂಗ್ರೆಸ್ ಅದರ ವಿರುದ್ಧ ಪ್ರತಿಭಟಿಸಿತ್ತು ಹಾಗೂ ಈ ತರಬೇತಿ ಶಿಬಿರ ನಡೆದಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದ ಜಿಲ್ಲಾಡಳಿತದ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಅನುಮತಿ ನೀಡಿದ ವಿಚಾರ ಕುರಿತಂತೆ ತನಿಖೆ ನಡೆಸಬೇಕೆಂದು ಸೈಕಿಯಾ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.
“ಇಂತಹ ಶಿಬಿರಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ, ನೆರೆಯ ದೇಶಗಳ ಅಕ್ರಮ ವಲಸಿಗರಿಂದ ಭಧ್ರತೆ ಅಪಾಯಗಳನ್ನು ಹತ್ತಿಕ್ಕುವ ಉದ್ದೇಶದಿಂದ ಇವುಗಳನ್ನು ನಡೆಸಲಾಗುತ್ತದೆ,” ಎಂದು ರಾಜ್ಯ ಬಜರಂಗದಳ ನಾಯಕರೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.