ಅಯೋಧ್ಯೆಯ ಮಂದಿರ, ಮಸೀದಿ ಎರಡೂ ಜಾತ್ಯತೀತತೆಯ ಸಂಕೇತಗಳು : ಮುಸ್ಲಿಂ ಲೀಗ್ ನಾಯಕ ಸಾದಿಕ್ ಅಲಿ ಶಿಹಾಬ್ ತಂಙಳ್‌

Update: 2024-02-04 16:38 GMT

ಪಾಣಕ್ಕಾಡ್ ಸಯ್ಯಿದ್ ಸಾದಿಕ್ ಅಲಿ ತಂಙಳ್

ಮಲಪ್ಪುರಂ : ಅಯೋಧ್ಯೆಯ ನೂತನ ದೇವಾಲಯ ಹಾಗೂ ಪ್ರಸ್ತಾವಿತ ಮಸೀದಿಯು ದೇಶದಲ್ಲಿ ಜಾತ್ಯತೀತತೆಯನ್ನು ಬಲಪಡಿಸಲಿದ್ದು, ಶ್ರೀರಾಮ ದೇವಾಲಯದ ನಿರ್ಮಾಣದ ಬಗ್ಗೆ ಪ್ರತಿಭಟನೆ ನಡೆಸುವ ಅಗತ್ಯವಿಲ್ಲವೆಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ ಅಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಸಾದಿಕ್ ಅಲಿ ತಂಙಳ್ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ವಿವಾದಕ್ಕೆ ಗ್ರಾಸವಾಗಿದೆ.

ಜನವರಿ 24ರಂದು ಇಲ್ಲಿಗೆ ಸಮೀಪದ ಮಂಜೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಂಙಳ್ ಅವರು ಈ ಹೇಳಿಕೆ ನೀಡಿದ್ದರು. ಅವರ ಭಾಷಣದ ವೀಡಿಯೊ ರವಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಐಯುಎಂಎಲ್ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾತಾಂತ್ರಿಕ ರಂಗ (ಯುಡಿಎಫ್)ದ ಪ್ರಮುಖ ಅಂಗ ಪಕ್ಷವಾಗಿದೆ ಹಾಗೂ ಮುಸ್ಲಿಂ ಸಮುದಾಯದಲ್ಲಿ ಅದು ಪ್ರಬಾವಶಾಲೀ ರಾಜಕೀಯ ಪಕ್ಷವಾಗಿದೆ.

ಐಯುಎಂಎಲ್ ನಾಯಕನ ಹೇಳಿಕೆಯನ್ನು ಕೇರಳದ ಆಡಳಿತಾರೂಢ ಎಡರಂಗದ ಅಂಗ ಪಕ್ಷವಾದ ಭಾರತೀಯ ನ್ಯಾಶನಲ್ ಲೀಗ್ (ಐಎನ್ಎಲ್) ತೀವ್ರವಾಗಿ ಖಂಡಿಸಿದೆ. ಆದರೆ ಕಾಂಗ್ರೆಸ್ ಹಾಗೂ ಐಯುಎಂಎಲ್ ತಂಙಳ್ ಅವರನ್ನು ಸಮರ್ಥಿಸಿದ್ದು, ಸಮಾಜದ ವಿಭಜನೆಗೆಗಾಗಿ ನಡೆಸಲಾಗುತ್ತಿರುವ ದ್ವೇಷದ ಅಭಿಯಾನವನ್ನು ನಿಲ್ಲಿಸಲು ಅವರು ಯತ್ನಿಸಿದ್ದಾರೆಂದು ಹೇಳಿದ್ದಾರೆ.

‘‘ಅಯೋಧ್ಯೆ ಶ್ರೀರಾಮ ದೇವಾಲಯವು ದೇಶದ ಬಹುತೇಕ ಜನರಿಂದ ಆರಾಧಿಸಲ್ಪಡುತ್ತಿರುವ ಮತ್ತು ಗೌರವಿಸಲ್ಪಡುತ್ತಿರುವುದು ವಾಸ್ತವವಾಗಿದೆ. ನಾವು ಅದರಿಂದ ವಿಮುಖರಾಗಲು ಸಾಧ್ಯವಿಲ್ಲ. ಅದರ ವಿರುದ್ಧ ಪ್ರತಿಭಟನೆ ನಡೆಸುವ ಅಗತ್ಯವಿಲ್ಲ. ನ್ಯಾಯಾಲಯದ ಆದೇಶದ ಆಧಾರದಲ್ಲಿ ಶ್ರೀರಾಮ ದೇವಾಲಯವು ತಲೆಯೆತ್ತಿದೆ. ಮಸೀದಿಯು ನಿರ್ಮಾಣಗೊಳ್ಳುತ್ತಿದೆ. ಇವೆರಡೂ ಭಾರತದ ಭಾಗವಾಗಿವೆ. ಶ್ರೀರಾಮ ದೇವಾಲಯ ಹಾಗೂ ಪ್ರಸ್ತಾವಿತ ಮಸೀದಿ, ಇವು ನಮ್ಮ ದೇಶದಲ್ಲಿ ಜಾತ್ಯತೀತತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಎರಡು ಉತ್ತಮ ಉದಾಹರಣೆಗಳಾಗಿವೆ” ಎಂದು ತಂಙಳ್ ಅವರು ಹೇಳಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

ಬಾಬರಿ ಮಸೀದಿಯು ಕರಸೇವಕರಿಂದ ನಾಶಗೊಂಡಿತು ಹಾಗೂ ಆ ಸಮಯದಲ್ಲಿ ನಾವು ಅದರ ವಿರುದ್ಧ ಪ್ರತಿಭಟನೆ ನಡೆಸಿದ್ದೆವು ಎಂದು ಹೇಳಿದ ಅವರು ಈ ವಿಷಯವನ್ನು ಮುಸ್ಲಿಮರು ಅತ್ಯಂತ ಪ್ರಬುದ್ದವಾದ ರೀತಿಯಲ್ಲಿ ನಿಭಾಯಿಸಿದರು’ ಎಂದರು.

ಗಾಂಧಿಯ ರಾಮರಾಜ್ಯವು ಆರೆಸ್ಸೆಸ್ ನ ರಾಮರಾಜ್ಯಕ್ಕಿಂತ ಭಿನ್ನವಾಗಿದೆಯೆಂಬುದನ್ನು ತಿಳಿಯದೆ ಇರುವಷ್ಟು ರಾಜಕೀಯ ನಾಯಕರು ಮೂಢರಲ್ಲವೆಂದು ಭಾರತೀಯ ನ್ಯಾಶನಲ್ ಲೀಗ್ ನ (ಐಎನ್ಎಲ್) ಕೇರಳ ರಾಜ್ಯ ಕಾರ್ಯಕಾರಿ ಸದಸ್ಯ ಎನ್.ಕೆ. ಅಬ್ದುಲ್ ಅಝೀಝ್ ಅವರು ಫೇಸ್ ಬುಕ್ ನ ಪೋಸ್ಟ್ ಒಂದರಲ್ಲಿ ತಿಳಿಸಿದ್ದಾರೆ.

‘‘ಆಸ್ತಿಕನೊಬ್ಬನ ಆಧ್ಯಾತ್ಮಿಕ ಹಿಂದೂ ಧರ್ಮವು, ಆರೆಸ್ಸೆಸ್ ನ ರಾಜಕೀಯ ಹಿಂದುತ್ವಕ್ಕಿಂತ ಭಿನ್ನವೆಂಬ ಸತ್ಯವನ್ನು ತಿಳಿಯದೆ ಇರುವಷ್ಟು ರಾಜಕೀಯ ನಾಯಕರುಗಳು ಮೂಢರಲ್ಲ. ಆದಾಗ್ಯೂ ಅವರು ತಮ್ಮ ಕಾರ್ಯಕರ್ತರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಐಯುಎಂಎಲ್ ನ ಸಾಮಾನ್ಯ ಕಾರ್ಯಕರ್ತರು ಈ ನಿಲುವನ್ನು ಒಪ್ಪಿಕೊಳ್ಳುವರು ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂದು ಆಝೀಝ್ ತಿಳಿಸಿದ್ದಾರೆ.

ಈ ಮಧ್ಯೆ ಕೇರಳ ವಿಧಾನಸಭೆಯ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಹಾಗೂ ಹಿರಿಯ ಐಯುಎಂಎಲ್ ನಾಯಕ ಕುಂಞಾಲಿ ಕುಟ್ಟಿ ಅವರು ತಂಙಳ್ ಅವರನ್ನು ಬೆಂಬಲಿಸಿದ್ದು, ಐಯುಎಂಎಲ್ ನಾಯಕನ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. ಅಯೋಧ್ಯೆ ವಿಷಯವನ್ನು ಬಿಜೆಪಿಯು ರಾಜಕೀಯಗೊಳಿಸಲು ಯತ್ನಿಸುತ್ತಿದ್ದು, ಅದರ ಬಲೆಗೆ ಬೀಳದಂತೆ ಜನರನ್ನು ಎಚ್ಚರಿಸಲು ತಂಙಳ್ ಯತ್ನಿಸಿದ್ದಾರೆಂದು ಅವರು ಹೇಳಿದ್ದಾರೆ.

‘‘ ಅವರು ಯಾಕೆ ಹಾಗೆ ಹೇಳಿದ್ದಾರೆಂಬುದನ್ನು ಜನರು ತಿಳಿದುಕೊಳ್ಳಬೇಕು. ಯಾರಾದರೂ ಬೆಂಕಿ ಹಚ್ಚಲು ಯತ್ನಿಸಿದರೆ ತಂಙಳ್ ಅದನ್ನು ನಂದಿಸಲು ಯತ್ನಿಸಿದ್ದಾರೆ ಅವರು ದ್ವೇಷ ಹಾಗೂ ವಿಭಜನೆಯ ಅಭಿಯಾನದ ವಿರುದ್ಧ ಮಾತನಾಡಿದ್ದಾರೆ’’ ಎಂದು ಸತೀಶನ್ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News