70 ವರ್ಷ ಮತ್ತು ಮೇಲ್ಪಟ್ಟವರಿಗೆ ಆಯುಷ್ಮಾನ ಭಾರತ್ ಅಡಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ; ಇದು ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಮಾಹಿತಿ...
ಹೊಸದಿಲ್ಲಿ: ಆಯುಷ್ಮಾನ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ ಪಿಎಂ-ಜೆಎವೈ)ಯಡಿ 70 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅವರ ಆರ್ಥಿಕ ಮಟ್ಟ,ಸಾರ್ವಜನಿಕ ಆರೋಗ್ಯ ಸೇವೆಯನ್ನು ಪರಿಗಣಿಸದೆ ವಾರ್ಷಿಕ ಐದು ಲಕ್ಷ ರೂ.ಗಳ ಆರೋಗ್ಯ ವಿಮೆಯನ್ನು ಒದಗಿಸಲು ಕೇಂದ್ರ ಸಂಪುಟವು ಒಪ್ಪಿಗೆ ನೀಡಿದೆ. ಇದು ಸಾಮಾಜಿಕ ವೈದ್ಯಕೀಯ ಆರೈಕೆ, ಔಷಧಿಗಳು ಮತ್ತು ಚಿಕಿತ್ಸೆಗಳ ಅತಿಯಾದ ವೆಚ್ಚಗಳ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯ ಆಸರೆಯಿಲ್ಲದೆ ತಮ್ಮ ಕಾಯಿಲೆಗಳ ಹೊರೆಯನ್ನು ನಿಭಾಯಿಸಲು ಕಷ್ಟಪಡುತ್ತಿರುವ ಹಿರಿಯ ನಾಗರಿಕರ ಆತಂಕಗಳನ್ನು ತಗ್ಗಿಸಲಿದೆ. ದೇಶದಲ್ಲಿ ಹಿರಿಯ ನಾಗರಿಕರ ಸಂಖ್ಯೆ ತ್ವರಿತವಾಗಿ ಹೆಚ್ಚುತ್ತಿದೆ.
ಪ್ರಸ್ತುತ ಈ ಯೋಜನೆಯು ಆದಾಯ ಆಧಾರಿತವಾಗಿದ್ದು,ಆರ್ಥಿಕವಾಗಿ ಬಡತನದಲ್ಲಿರುವ ಅರ್ಹ ಕುಟುಂಬಗಳ ಸದಸ್ಯರಿಗೆ ವಯಸ್ಸಿನ ನಿರ್ಬಂಧವಿಲ್ಲದೆ ಹಂಚಿಕೆಯ ಸ್ವರೂಪದಲ್ಲಿ ಐದು ಲ.ರೂ.ಗಳ ವಾರ್ಷಿಕ ಆರೋಗ್ಯ ವಿಮೆಯನ್ನು ಒದಗಿಸಿದೆ. ಸರಕಾರದ ಹೇಳಿಕೆಯಂತೆ 4.5 ಕೋಟಿ ಕುಟುಂಬಗಳಿಂದ 70 ವರ್ಷ ಮತ್ತು ಮೇಲ್ಪಟ್ಟ ಹೆಚ್ಚುವರಿ ಆರು ಕೋಟಿ ಜನರು ಆರೋಗ್ಯ ವಿಮೆ ಸೌಲಭ್ಯವನ್ನು ಪಡೆಯಲಿದ್ದಾರೆ. ಅರ್ಹ ಫಲಾನುಭವಿಗಳಿಗೆ ಪಿಎಂ-ಜೆಎವೈ ಅಡಿ ಹೊಸ ಕಾರ್ಡ್ ಅನ್ನು ನೀಡಲಾಗುತ್ತದೆ.
ಯೋಜನೆಯಿಂದ 70 ವರ್ಷ ಮತ್ತು ಮೇಲ್ಪಟ್ಟ ಎಲ್ಲರೂ ಲಾಭ ಪಡೆಯುತ್ತಾರೆಯೇ?:
ಎಬಿ ಪಿಎಂ-ಜೆಎವೈ ಯೋಜನೆಯಡಿ 70 ವರ್ಷ ಮತ್ತು ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೆ ಯೋಜನೆಯ ಲಾಭ ದೊರೆಯಲಿದೆ. ಈಗಾಗಲೇ ಯೋಜನೆಗೆ ಸೇರ್ಪಡೆಗೊಂಡಿರುವ ಕುಟುಂಬಗಳಿಗೆ ಸೇರಿದ ಈ ವಯೋಗುಂಪಿನ ಹಿರಿಯ ನಾಗರಿಕರು ತಮಗಾಗಿ ಐದು ಲ.ರೂ.ಗಳ ಹೆಚ್ಚುವರಿ ಆರೋಗ್ಯ ರಕ್ಷಣೆಯನ್ನು ಪಡೆಯಲಿದ್ದಾರೆ. ಕೇಂದ್ರ ಸರಕಾರದ ಆರೋಗ್ಯ ಯೋಜನೆ(ಸಿಜಿಎಚ್‌ಎಸ್),ಮಾಜಿ ಯೋಧರ ವಂತಿಗೆ ಆರೋಗ್ಯ ಯೋಜನೆ(ಇಸಿಎಚ್‌ಎಸ್) ಮತ್ತು ಆಯುಷ್ಮಾನ್ ಕೇಂದ್ರೀಯ ಸಶಸ್ತ್ರ ಪೋಲಿಸ್ ಪಡೆ (ಸಿಎಪಿಎಫ್)ಯಂತಹ ಇತರ ಸರಕಾರಿ ಆರೋಗ್ಯ ವಿಮೆ ಯೋಜನೆಗಳ ಫಲಾನುಭವಿಗಳು ತಮ್ಮ ಹಾಲಿ ಯೋಜನೆಯನ್ನು ಮುಂದುವರಿಸಬಹುದು ಅಥವಾ ಎಬಿ ಪಿಎಂ-ಜೆಎವೈ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
ಖಾಸಗಿ ಆರೋಗ್ಯ ವಿಮೆ ಪಾಲಿಸಿಗಳನ್ನು ಹೊಂದಿರುವವರು ಅಥವಾ ಇಎಸ್‌ಐ ಯೋಜನೆಯ ವ್ಯಾಪ್ತಿಯಲ್ಲಿರುವ 70 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರು ಆಯುಷ್ಮಾನ್ ಭಾರತದ ವಿಸ್ತರಿತ ಯೋಜನೆಯ ಲಾಭಗಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಯೋಜನೆಯು ಕುಟುಂಬದಲ್ಲಿಯ ಎಲ್ಲ ಹಿರಿಯ ನಾಗರಿಕರನ್ನು ಒಳಗೊಳ್ಳುತ್ತದೆಯೇ?:
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ ವಿವರಿಸಿರುವಂತೆ,ಇಂತಹ ಸಂದರ್ಭಗಳಲ್ಲಿ ಆರೋಗ್ಯ ರಕ್ಷಣೆ ಸೌಲಭ್ಯವನ್ನು ಕುಟುಂಬದಲ್ಲಿಯ ಅರ್ಹ ಫಲಾನುಭವಿಗಳು ಹಂಚಿಕೊಳ್ಳುತ್ತಾರೆ.
ಕುಟುಂಬವೊಂದಲ್ಲಿ 70 ಪ್ಲಸ್ ವಯಸ್ಸಿನ ಇಬ್ಬರು ಹಿರಿಯ ನಾಗರಿಕರಿದ್ದರೆ ಐದು ಲಕ್ಷ ರೂ.ಗಳ ವಿಮೆಯು ಅವರ ನಡುವೆ ಹಂಚಿಕೆಯಾಗುತ್ತದೆ. ಇದು ವಿಶೇಷವಾಗಿ ಭಾರತದಲ್ಲಿ ವಿಭಕ್ತ ಕುಟುಂಬಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಈ ಯೋಜನೆಗೇಕೆ ಮಹತ್ವ?:
ಆಯುಷ್ಮಾನ ಭಾರತ್ ಯೋಜನೆಯು ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಸಜ್ಜಾಗಿದ್ದರೆ, ಇದು ಸಂಫೂರ್ಣ ಆರೋಗ್ಯ ರಕ್ಷಣೆಯನ್ನು ಪಡೆಯಲಿರುವ ಇಂತಹ ವಯೋಮಾನದ ಮೊದಲ ಸಮೂಹವಾಗಲಿದೆ.
ಸರಕಾರಕ್ಕೆ ಎಷ್ಟು ವೆಚ್ಚವಾಗಲಿದೆ?:
ಯೋಜನೆಯ ಆರಂಭಿಕ ವೆಚ್ಚದ ಗಾತ್ರವು 3,437 ಕೋಟಿ ರೂ.ಆಗಿದೆ. ಇದು ಬೇಡಿಕೆಯಾಧಾರಿತ ಯೋಜನೆಯಾಗಿದ್ದು, ಬೇಡಿಕೆಯು ಹೆಚ್ಚಿದಂತೆ ವ್ಯಾಪ್ತಿಯೂ ಹೆಚ್ಚಲಿದೆ ಎಂದು ವೈಷ್ಣವ್ ತಿಳಿಸಿದರು.
ಹೆಚ್ಚಿನ ರಾಜ್ಯಗಳು ಶೇ.40ರಷ್ಟು ಚಿಕಿತ್ಸಾ ವೆಚ್ಚವನ್ನು ಭರಿಸಲಿದ್ದರೆ ಗುಡ್ಡಗಾಡು ಪ್ರದೇಶಗಳು ಮತ್ತು ಈಶಾನ್ಯ ಭಾರತದ ರಾಜ್ಯಗಳು ಪಾವತಿಸಬೇಕಾದ ಚಿಕಿತ್ಸಾ ವೆಚ್ಚದ ಶೇ.90ರಷ್ಟನ್ನು ಕೇಂದ್ರವೇ ಭರಿಸುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
70 ವರ್ಷ ಮತ್ತು ಮೇಲ್ಪಟ್ಟವರಿಗೆ ಆರೋಗ್ಯ ರಕ್ಷಣೆಯ ವೆಚ್ಚವು ಎಲ್ಲ ವಯೋಗುಂಪುಗಳಲ್ಲಿ ಶೇ.40ರಷ್ಟು ಕಡುಬಡವರಿಗೆ ಆರೋಗ್ಯ ರಕ್ಷಣೆ ವೆಚ್ಚಕ್ಕಿಂತ ಹೆಚ್ಚಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.