ಹತ್ಯೆಗೊಳಗಾಗಿರುವ ಬಾಂಗ್ಲಾದೇಶದ ಸಂಸದ | ಮರು ಚುನಾವಣೆ ಘೋಷಿಸಲಾಗದ ಸಂದಿಗ್ಧತೆಯಲ್ಲಿ ಬಾಂಗ್ಲಾದೇಶ ಚುನಾವಣಾ ಆಯೋಗ

Update: 2024-05-27 16:39 GMT

ಅನ್ವರುಲ್ ಅಝೀಂ ಅನರ್ | PTI 

ಢಾಕಾ: ಒಂದು ವೇಳೆ ಮಾರ್ಚ್ 13ರಂದು ಕೋಲ್ಕತ್ತಾದಲ್ಲಿ ಹತ್ಯೆಗೀಡಾಗಿರುವ ಬಾಂಗ್ಲಾದೇಶ ಸಂಸದ ಅನ್ವರುಲ್ ಅಝೀಂ ಅನರ್ ಅವರ ಮೃತದೇಹವು ದೊರೆಯದಿದ್ದರೆ, ಬಾಂಗ್ಲಾದೇಶ ಚುನಾವಣಾ ಆಯೋಗವು ಅವರ ಕ್ಷೇತ್ರಕ್ಕೆ ಮರು ಚುನಾವಣೆ ಘೋಷಿಸಲಾಗದ ಸಂದಿಗ್ಧತೆ ಎದುರಾಗಲಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಝೆನೈದಾ-,4 ಪ್ರಾಂತ್ಯದ ಮೂರು ಬಾರಿ ಸಂಸದರಾದ ಅನ್ವರುಲ್ ಅಝೀಂ ಅನರ್, ವೈದ್ಯಕೀಯ ತಪಾಸಣೆಗೆಂದು ಮೇ 12ರಂದು ಢಾಕಾದಿಂದ ಕೋಲ್ಜತ್ತಾಗೆ ನಿರ್ಗಮಿಸಿದ್ದರು. ಮರು ದಿನ ಅವರು ಅಪಾರ್ಟ್‌ಮೆಂಟ್ ಒಂದರಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆದರೆ, ಹಂತಕರು ಅವರ ದೇಹವನ್ನು ತುಂಡುತುಂಡಾಗಿ ಕತ್ತರಿಸಿ, ನಾಲೆಯೊಂದರ ವಿವಿಧ ಭಾಗಗಳಲ್ಲಿ ಎಸೆದಿರುವುದರಿಂದ ಅವರ ಮೃತ ದೇಹವಿನ್ನೂ ಸಂಪೂರ್ಣವಾಗಿ ಪತ್ತೆಯಾಗಿಲ್ಲ.

ಒಂದು ವೇಳೆ ಬಾಂಗ್ಲಾದೇಶ ಚುನಾವಣಾ ಆಯೋಗವೇನಾದರೂ ಅವರ ಕ್ಷೇತ್ರಕ್ಕೆ ಮರು ಚುನಾವಣೆ ಘೋಷಿಸಬೇಕಿದ್ದರೆ, ಅವರು ಮೃತಪಟ್ಟಿದ್ದಾರೆ ಎಂದು ಗೃಹ ಸಚಿವಾಲಯವು ಆಯೋಗಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಅಲ್ಲದೆ, ಯಾವುದೇ ಕ್ಷೇತ್ರ ತೆರವಾದರೆ, ಅಂತಹ ಕ್ಷೇತ್ರಕ್ಕೆ 90 ದಿನಗಳೊಳಗಾಗಿ ಚುನಾವಣೆ ನಡೆಸಬೇಕಾಗುತ್ತದೆ. ಆದರೆ, ಸಂಸದ ಅನ್ವರುಲ್ ಅಝೀಂ ಅನರ್ ಅವರ ಮೃತ ದೇಹವಿನ್ನೂ ಪತ್ತೆಯಾಗದಿರುವುದರಿಂದ, ಅವರ ಕ್ಷೇತ್ರ ತೆರವಾಗಿದೆ ಎಂದು ಅಧಿಕೃತವಾಗಿ ಪ್ರಕಟಿಸಲು ಸಾಧ್ಯವಿಲ್ಲ. ಮತ್ತೊಂದೆಡೆ, ಯಾವುದೇ ಕ್ಷೇತ್ರ ತೆರವಾದರೆ, ಅಂತಹ ಕ್ಷೇತ್ರಕ್ಕೆ 90 ದಿನಗಳೊಳಗಾಗಿ ಚುನಾವಣೆ ನಡೆಸಬೇಕಾಗುತ್ತದೆ. ಆದರೆ, ಅಂತಹ ಯಾವುದೇ ಅಧಿಕೃತ ಮಾಹಿತಿಯನ್ನು ಗೃಹ ಸಚಿವಾಲಯದಿಂದ ಸ್ವೀಕರಿಸದಿರುವುದರಿಂದ ಬಾಂಗ್ಲಾದೇಶ ಚುನಾವಣಾ ಆಯೋಗ ಸಂದಿಗ್ಧಕ್ಕೆ ಸಿಲುಕಿದೆ ಎಂದು ಹೇಳಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಸಂಸದ ಅನ್ವರುಲ್ ಅಝೀಂ ಅನರ್ ಅವರನ್ನು ಉಸಿರುಗಟ್ಟಿಸಿ ಹತ್ಯೆಗೈಯ್ಯಲಾಗಿದ್ದು, ಅನಂತರ, ಅವರ ದೇಹವನ್ನು ತುಂಡುತುಂಡಾಗಿ ಕತ್ತರಿಸಲಾಗಿದೆ. ಬಳಿಕ ಅವರ ದೇಹದ ತುಂಡುಗಳನ್ನು ನಾಲೆಯೊಂದರ ವಿವಿಧ ಭಾಗಗಳಲ್ಲಿ ವಿಸರ್ಜಿಸಲಾಗಿದೆ.

ಈ ಸಂಬಂಧ ಪಶ್ಚಿಮ ಬಂಗಾಳ ಸಿಐಡಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಶಂಕಿತ ಆರೋಪಿಗಳು, ಈ ಹತ್ಯೆಯಲ್ಲಿ ತಮ್ಮ ಪಾತ್ರವಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕೋಲ್ಕತ್ತಾಗೆ ಧಾವಿಸಿರುವ ಬಾಂಗ್ಲಾದೇಶ ಪೊಲೀಸ್ ಅಧಿಕಾರಿಗಳೂ ಕೂಡಾ ಸಿಐಡಿ ಪೊಲೀಸರ ತನಿಖೆಯೊಂದಿಗೆ ಭಾಗಿಯಾಗಿದ್ದಾರೆ. ಆದರೆ, ಇಲ್ಲಿಯವರೆಗೆ ಹತ್ಯೆಗೀಡಾಗಿರುವ ಸಂಸದರ ಮೃತ ದೇಹ ದೊರೆಯದೆ ಇರುವುದರಿಂದ ತನಿಖೆಯು ಸಂಕೀರ್ಣಗೊಂಡಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News